ಪ್ರೀತಿಯೇ ದೇವರು ಎಂಬ ಮಾತಿದೆ. ಏಕೆಂದರೆ ನಿಷ್ಕಳಂಕ ಪ್ರೀತಿಯಲ್ಲಿ ನಾವು ದೇವರನ್ನೇ ಕಾಣಬಹುದು. ಶಾಂತಿ ಎನ್ನುವುದು ಸಂತೋಷದ ಪರಾಕಾಷ್ಠೆ ಆನಂದದ ತುರೀಯಾವಸ್ಥೆ, ಆದುದರಿಂದ ಪ್ರೀತಿಯಲ್ಲಿ ಶಾಂತಿ ಅಂತರ್ಗತವಾಗಿದೆ. ಸ್ವಾಮಿ ವಿವೇಕಾನಂದರು ಹೇಳುತ್ತಾರೆ: ‘ದೇವರನ್ನು ಪ್ರೀತಿಸಲು ನಮಗೆ ಸುಲಭ ಸಾಧ್ಯವಾಗಬೇಕಾದರೆ ನಮ್ಮ ಹಾಗಿನ ರೂಪದಲ್ಲಿ ನಾವು ಅವನನ್ನು ಕಾಣುವುದು ಅಗತ್ಯ. ದೇವರನ್ನು ಅಮೂರ್ತವಾಗಿ ನಾವು ಜನಸಾಮಾನ್ಯರು ಕಲ್ಪಿಸಲಾರೆವು. ಆದರೆ ಆ ದೇವರನ್ನು ನಾವು ರಾಮನಾಗಿ, ಕೃಷ್ಣನಾಗಿ, ಬುದ್ಧನಾಗಿ, ಕಾಣಬಹುದು. ನಮ್ಮದೇ ಸ್ವಭಾವದಲ್ಲಿ ಅಭಿವ್ಯಕ್ತಗೊಂಡ ಸ್ವರೂಪದಲ್ಲಿ ದೇವರನ್ನು ನಾವು ಕಾಣುವುದು ಸುಲಭ. ಕಾಣುವುದು ಮಾತ್ರವಲ್ಲ; ನಮ್ಮ ಅಂತಃಪ್ರೇರಣೆಯಲ್ಲಿ ನಾವು ಕೂಡ ಅವರಂತೆಯೇ ಆಗಬೇಕೆಂಬ ಅತ್ಯಾಸೆ ಮೂಡುವುದು ಕೂಡ ಸಹಜವೇ. ಮಾನವನ ರೂಪ ತಳೆದು ಭುವಿಗೆ ಅವತರಿಸಿ ಬಂದ ದೇವರು ಮಾನವನ ಎಲ್ಲ ಇತಿಮಿತಿಗಳನ್ನು ತಮಗೆ ಅರ್ಪಿಸಿಕೊಂಡ ಹೊರತಾಗಿಯೂ ತಮ್ಮ ಅವತಾರದ ಉದ್ದೇಶವನ್ನು ಸಾಧಿಸಿ ತೋರಿಸುವುದು ಮನುಷ್ಯನಿಗೆ ಸತ್ಪಥವನ್ನು ತೋರಲೆಂದೇ ಅಲ್ಲವೇ ? ಹಾಗೆ ನೋಡಿದರೆ ಬುದ್ಧಿಬಲಿಯದ ಮಗುವಿಗೆ ದೇವರು ಯಾರು? ಅದರ ತಾಯಿಯೇ ಅದಕ್ಕೆ ದೇವರು. ಆ ತಾಯಿಗಾದರೋ ತನ್ನ ಮಗುವೇ ತನಗೆ ದೇವರು! ಮಗುವಿನಲ್ಲಿ ತಾಯಿಯು ದೇವರನ್ನು ಕಾಣುವುದು ಅದರ ನಿಷ್ಕಳಂಕ ಭಾವದಲ್ಲಿ – ನಿಷ್ಕಪಟ ಹೂನಗೆಯಲ್ಲಿ ! ಅದೇ ಮಗುವಿಗೆ ತನ್ನ ತಾಯಿಯೇ ದೇವರಾಗಿ ಕಾಣುವುದು ಕೂಡ ಇದೇ ಕಾರಣಕ್ಕೆ! ಗೌತಮ ಬುದ್ಧ ಹೇಳಿದಂತೆ ಒಂದು ಹೃದಯ ಇನ್ನೊಂದು ಹೃದಯದಲ್ಲಿ ದೇವರನ್ನಲ್ಲದೆ ಬೇರೇನನ್ನೂ ಕಾಣದು