ಪರ್ಶಿಯನ್ ಸೂಫಿ ಪದ್ಯವೊಂದರ ಭಾವ ಹೀಗಿದೆ: ‘ನಾನೊಬ್ಬ ಸ್ತ್ರೀಯಾಗಿ ಅವನೊಬ್ಬ ಪುರುಷನಾಗಿದ್ದ ಕಾಲ ಒಂದಿತ್ತು. ಪ್ರೇಮ ವೃದ್ಧಿಯಾಗುತ್ತಾ ಬಂದಂತೆ ಅವನೂ ಇಲ್ಲ. ನಾನೂ ಇಲ್ಲ ಎಂಬಂತಹ ಸ್ಥಿತಿಗೆ ತಲುಪಿದೆವು. ಇಬ್ಬರೂ ಇದ್ದ ಕಾಲ ನನಗೆ ಅಸ್ಪಷ್ಟವಾಗಿ ನೆನಪಿದೆ. ಆದರೆ ಪ್ರೇಮ ಅವೆರಡರ ಮಧ್ಯೆ ಬಂದು ಎರಡನ್ನೂ ಒಂದು ಮಾಡಿತು.’ ದೇವರು ಮತ್ತು ನಮ್ಮ ನಡುವಿನ ಪ್ರೇಮದ ಬೆಸುಗೆ ಎಂದರೆ ಹೀಗೆಯೇ. ದೇವರಲ್ಲಿ ದೇವರನ್ನು ಕಾಣುತ್ತಾ ಹೋದಂತೆ ಒಂದು ಹಂತದಲ್ಲಿ ದೇವರಲ್ಲಿ ನಾವು ನಮ್ಮನ್ನೇ ಕಾಣುತ್ತೇವೆ. ಮುಂದಿನ ಸ್ಥಿತಿಯಲ್ಲಿ ದೇವರೇ ನಮ್ಮಲ್ಲಿ ಲೀನವಾದಂತಹ ಅಪೂರ್ವ ಅನುಭವ ನಮ್ಮದಾಗುವುದು. ಗೋಕುಲದಲ್ಲಿ ಶ್ರೀಕೃಷ್ಣನೊಡನೆ ರಾಸಲೀಲೆಯಲ್ಲಿ ನಿರತರಾಗಿದ್ದ ವೇಳೆ ಗೋಪಿಕೆಯರಿಗೆ ತಾವು ನರ್ತಿಸುತ್ತಾ ಹೋದಂತೆ ಒಂದು ಹಂತದಲ್ಲಿ ತಾವೇ ಶ್ರೀಕೃಷ್ಣನೆಂಬಂತೆ ಅನ್ನಿಸತೊಡಗಿದ್ದು ಸುಳ್ಳಲ್ಲ. ಆದರೆ ಕೃಷ್ಣನನ್ನು ಅವರು ತಮ್ಮಿಂದ ಬೇರೆಯಾಗಿ ಕಂಡ ಮರುಕ್ಷಣದಲ್ಲಿ ತಾವು ಕೇವಲ ಗೋಪಿಕೆಯರೆಂಬ ಪ್ರಜ್ಞೆ ಒಡನೆಯೇ ಅವರಲ್ಲಿ ಮೂಡಿತೆನ್ನುವುದೂ ಸತ್ಯ. ಏನಿದ್ದರೂ ಪ್ರೀತಿಯ ಪರಾಕಾಷ್ಠೆ ಒಂದು ಹಂತದಲ್ಲಿ ದೇವರನ್ನೇ ತಮ್ಮಲ್ಲಿ ಲೀನ ಮಾಡಿ ಕೊಂಡ ಸ್ಥಿತಿಗೆ ಆ ಗೋಪಿಕೆಯರು ತಲುಪಿದ್ದರು! ನಿಜವಾಗಿ ನೋಡಿದರೆ ಪ್ರೀತಿಯ ಅಭಿವ್ಯಕ್ತಿಯ ಪರಾಕಾಷ್ಠೆಯೇ ಐಕ್ಯ! ಪರ್ಶಿಯನ್ ಸೂಫಿ ಪದ್ಯದಲ್ಲಿ ಕವಿಯು ಹೇಳಿದಂತೆ ‘ಪ್ರೇಮವು ನಡುವೆ ಬಂದ ಎರಡನ್ನೂ ಒಂದು ಮಾಡಿತು.’ ದೇವರಲ್ಲಿ ದೇವರನ್ನು ಕಾಣಲು ಸಾಧ್ಯವಾಗಬೇಕಾದರೆ ಜಗತ್ತಿನ ಸಕಲ ಚರಾಚರ ವಸ್ತುಗಳಲ್ಲಿ, ಪ್ರಾಣಿಗಳಲ್ಲಿ ಮನುಷ್ಯರಲ್ಲಿ ದೇವರನ್ನು ಕಾಣಲು ತೊಡಗಬೇಕು. ಹಾಗೆ ಮಾಡಲು ಬೇಕಿರುವುದು ನಿಷ್ಕಳಂಕ, ನಿಷ್ಕಪಟ, ನಿಸ್ವಾರ್ಥಭಾವದ ಪ್ರೀತಿಯಲ್ಲದೇ ಬೇರೇನೂ ಅಲ್ಲ