ದೇವರ ಸೃಷ್ಟಿಯಲ್ಲಿ ಮಾನವ ಶರೀರವು ಅತ್ಯಂತ ಉತ್ಕೃಷ್ಟವಾದದ್ದು. ದೇವರ ಸನ್ನಿಧಾನವನ್ನು ಸೇರುವ ಕೊನೆಯ ಮೆಟ್ಟಿಲು ಇದು. ಪರಮ ದಯಾಳುವಾದ ಭಗವಂತನ ಕೃಪೆಯಿಂದಲೇ ನಮಗೆ ಈ ಮಾನವ ಶರೀರವು ಪ್ರಾಪ್ತವಾಗಿದೆ ಎಂಬ ಸತ್ಯವನ್ನು ನಾವು ಅರಿಯಬೇಕು. ದೇವರನ್ನು ತಲುಪಲು ಇದೊಂದು ಅದ್ಭುತವಾದ ಸಾಧನ. ಆದರೆ ಇದನ್ನು ಅರಿಯಲು ನಮ್ಮನ್ನು ಆವರಿಸಿಕೊಂಡಿರುವ ಪ್ರಕೃತಿಯ ಮಾಯೆಯು ಬಿಡದು. ಸದಾ ಇಂದ್ರಿಯ ಸುಖಗಳ ಬೆನ್ನುಹತ್ತುವಂತೆ ಮಾಡುವ ಈ ಮಾಯೆಯು ನಮ್ಮನ್ನು ಐಹಿಕ ಪ್ರಪಂಚಕ್ಕೆ ಬಿಗಿಯಾಗಿ ಬಂಧಿಸಿದೆ. ಅಜ್ಞಾನದ ನಿದ್ರೆಯಲ್ಲಿ ನಮ್ಮನ್ನು ಮುಳುಗಿಸಿದೆ. ನಿತ್ಯ ಬದುಕಿನ ವ್ಯವಹಾರಗಳಲ್ಲಿ ನಾವು ಎಷ್ಟೋಂದು ಯಾಂತ್ರಿಕವಾಗಿ ಮುಳುಗಿರುವೆವೆಂದರೆ ಯಾರದೋ ಕೈಗೊಂಬೆಯಾಗಿ ನಾವು ವರ್ತಿಸುತ್ತಿದ್ದೇವೆ ಎಂಬಂತೆ ನಮಗೆ ಭಾಸವಾಗುತ್ತದೆ. ಪ್ರೀತಿ, ಸಿಟ್ಟು, ಅಸಹನೆ, ದ್ವೇಷ, ರೋಷಗಳನ್ನು ದಿನನಿತ್ಯದ ವ್ಯವಹಾರದಲ್ಲಿ ಬೇಕಾಬಿಟ್ಟಿ ಎಂಬಂತೆ ಪ್ರದರ್ಶಿಸುತ್ತೇವೆ. ಕೊನೆಗೆ ‘ಛೇ, ಹಾಗೆ ನಾನು ವರ್ತಿಸಲೇಬಾರದಿತ್ತು….‘ ಎಂಬ ಪಶ್ಚಾತ್ತಾಪದಲ್ಲಿ ಬೇಯುತ್ತೇವೆ. ಹಾಗಿದ್ದರೆ ನಾವು ಬದುಕಿನಲ್ಲಿ ನಿಜಕ್ಕೂ ಯಾರ ಆಜ್ಞಾನುಸಾರವಾಗಿ ವರ್ತಿಸುತ್ತಿರುತ್ತೇವೆ? ನಮ್ಮನ್ನು ಇಷ್ಟಬಂದಂತೆ ಕುಣಿಸುವ ಶಕ್ತಿ ಯಾವುದು? ನಮ್ಮೊಳಗಿನ ಷಡೈರಿಗಳೇ ನಮ್ಮನ್ನು ಖುಶಿಬಂದಂತೆ ಕುಣಿಸುವ ಶಕ್ತಿ ಎಂದು ಬೇರೆ ಹೇಳಬೇಕಾಗಿಲ್ಲ. ಐಹಿಕ ಪ್ರಪಂಚವನ್ನು ನಾವು ಬಹುವಾಗಿ ಬಯಸುವಂತೆ ಮಾಡುವ ಅರಿ ಷಡ್ವರ್ಗಗಳೇ ನಮ್ಮನ್ನು ಅಜ್ಞಾನದ ಅಂಧಕಾರಕ್ಕೆ ತಳ್ಳುತ್ತವೆ. ಈ ಅಜ್ಞಾನದ ಅಂಧಕಾರದಲ್ಲಿ ಇರುವಷ್ಟು ಕಾಲವೂ ನಮಗೆ ನಮ್ಮೊಳಗಿನ ಆತ್ಮ ರೂಪಿ ದೇವರ ಗುಡಿಯು ಕಾಣಸಿಗದು.