- ಸಮಚಿತ್ತ–ಸಮಭಾವ
ಬದುಕಿನ ಮನುಷ್ಯನ ಪಾಲಿಗೆ ಎದುರಾಗುವ ಅತ್ಯಂತ ದೊಡ್ಡ ಸವಾಲು ಯಾವುದು? ಇದೊಂದು ಸರಳವಾದ ಪ್ರಶ್ನೆ. ಅದರ ಉತ್ತರವೂ ಸರಳವೇ ಆಗಿದೆ. ಮನಸ್ಸಿನ ಪ್ರಸನ್ನತೆಯನ್ನು ಕಾಯ್ದುಕೊಳ್ಳುವುದಕ್ಕಿಂತ ದೊಡ್ಡ ಸವಾಲು ಯಾವುದಿದೆ? ಹಾಗೆಂದು ಮನಸ್ಸನ್ನು ಪ್ರಸನ್ನವಾಗಿಸುವುದು ಸುಲಭದ ಮಾತಲ್ಲ. ಮನಸ್ಸು ಹೂವಿನಷ್ಟು ಕೋಮಲವು ಹೌದು. ವಜ್ರದಷ್ಟು ಕಠಿಣವೂ ಆದೀತು. ಮನಸ್ಸು ಹೂವಿನ ಹಾಗೆ ಎನ್ನಲು ಕಾರಣ ಅದು ಕ್ಷಣ ಮಾತ್ರದಲ್ಲಿ ಉಲ್ಲಸಿತವಾಗುವ ಮತ್ತು ಅಷ್ಟೇ ತ್ವರಿತವಾಗಿ ಮುದುಡಿಕೊಳ್ಳುವ ಲಕ್ಷಣವನ್ನು ಹೊಂದಿದೆ. ಆದರೆ ಇವೆರಡೂ ಸ್ಥಿತಿಗಳ ನಡುವೆ ಸ್ಥಿರವಾಗಿ ಮನಸ್ಸನ್ನು ಉಳಿಸಿಕೊಳ್ಳುವುದನ್ನೇ ಸ್ಥಿತಪ್ರಜ್ಞೆ ಎನ್ನಬೇಕು. ಇದನ್ನು ಸಾಧಿಸುವುದು. ಬಲುಕಷ್ಟ ಆದರೆ ಕುರುಕ್ಷೇತ್ರದಲ್ಲಿ ಯುದ್ಧ ಮಾಡಲೊಪ್ಪದ ಭಾವವಿಕಾರಕ್ಕೆ ಒಳಗಾದ ಅರ್ಜುನನಿಗೆ ಶ್ರೀ ಕೃಷ್ಣ ಬೋಧಿಸುವುದೇ ಸಮಚಿತ್ತ ಸಾಧನೆಯ ಸಿದ್ಧಾಂತವನ್ನು ಕೃಷ್ಣ ಹೇಳುತ್ತಾನೆ. ಆತ್ಮವೊಂದೇ ಶಾಶ್ವತ ದೇಹವಲ್ಲ ಜನನ–ಮರಣ ಸಹಜವಾದ ಶರೀರ ಧರ್ಮವನ್ನು ಅರಿತವರಿಗೆ ಸುಖ–ದುಃಖಗಳನ್ನು ಉಂಟುಮಾಡುವ ಇಂದ್ರೀಯ ಸಹಜ ವಿಷಯಗಳು ಯಾವತ್ತೂ ಅನಿತ್ಯವಾದದ್ದು ಎಂಬ ಸತ್ಯ ತಿಳಿಯುತ್ತದೆ. ಸುಖ–ದುಃಖಗಳನ್ನು ಸಮಾನವಾಗಿ ತಿಳಿದುಕೊಳ್ಳುವ ಧೀರ ಪುರುಷನಿಗೆ ಈ ಇಂದ್ರಿಯಗಳು ಮತ್ತು ವಿಷಯಗಳ ಸಂಯೋಗವು ವ್ಯಾಕುಲತೆಯನ್ನು ಉಂಟುಮಾಡುವುದಿಲ್ಲ. ಅವನು ಮೋಕ್ಷಕ್ಕೆ ಯೋಗ್ಯನಾಗುತ್ತಾನೆ.