‘ನಮಗೆ ತಿಳಿದಿರುವ ಈ ಐಹಿಕ ಪ್ರಪಂಚಕ್ಕೆ ಅತಿ ಹೇಯವಾಗಿ ಅಂಟಿ ಕೊಂಡಿರುವುದೇ ಪಾಪಗಳಿಗೆಲ್ಲ ಮೂಲ’ ಎಂಬ ಎಚ್ಚರಿಕೆಯನ್ನು ನಮಗೆ ಸ್ವಾಮಿ ವಿವೇಕಾನಂದರು ಕೊಡುತ್ತಾರೆ. ಮಹಾತ್ಮಾ ಗಾಂಧೀಜಿಯವರ ಪ್ರಕಾರವೂ ಮನುಷ್ಯನು ಯಾವತ್ತೂ ಬಹಳವಾಗಿ ಇಷ್ಟಪಡುವುದು ತನಗೆ ಕೆಟ್ಟದ್ದನ್ನು ಉಂಟುಮಾಡಬಲ್ಲ ವಸ್ತುಗಳನ್ನೇ! ನಿಜಕ್ಕಾದರೆ ಪ್ರಾಪಂಚಿಕ ಸುಖಭೋಗಗಳನ್ನು ಹಂಬಲಿಸುವ ಉನ್ಮಾದದಲ್ಲಿ ಮನುಷ್ಯನಲ್ಲಿ ಅತ್ಯಂತ ಸ್ವಾರ್ಥಪರತೆ, ಸ್ವಜನಪಕ್ಷಪಾತ, ಲೋಭ, ಮೋಹಗಳು ಮನೆಮಾಡುತ್ತವೆ. ಮೋಸ, ಕಳ್ಳತನ, ಲಂಚ, ಭ್ರಷ್ಟಾಚಾರ ಮೊದಲಾದ ಹೇಯ ಅಪರಾಧಗಳಿಗೂ ಆತನಿಗೆ ಅದರಿಂದ ಪ್ರೇರಣೆ ದೊರಕುತ್ತದೆ. ಕೆಟ್ಟ ರೀತಿಯಲ್ಲಿ ಅಧರ್ಮದ ಮೂಲಕ ಸಂಪತ್ತನ್ನು ಕಲೆಹಾಕಬೇಕೆಂಬ ಹುಚ್ಚು ಆತನನ್ನು ಆವರಿಸಿಕೊಳ್ಳುತ್ತದೆ. ಪರಿಣಾಮದಲ್ಲಿ ಆತ ಹಣವನ್ನೇ ದೇವರನ್ನಾಗಿ ಮಾಡುತ್ತಾನೆ! ಇಂದಿನ ಆಧುನಿಕ ಜಗತ್ತು ಇಷ್ಟೋಂದು ಅಮಾನುಷವಾಗಿ ಪರಿವರ್ತಿತವಾಗಲು ಇದೇ ಕಾರಣ. ಮನುಷ್ಯನು ಹಣವನ್ನೇ ದೇವರನ್ನಾಗಿ ಮಾಡಿದಾಗ ಎಲ್ಲ ಮಾನವೀಯ ಮೌಲ್ಯಗಳು ಅಮಾನುಷವಾಗಿ ರಾಕ್ಷಸ ರೂಪವನ್ನು ತಳೆಯುತ್ತವೆ. ಹಣಕ್ಕಾಗಿ ಯಾರು ಏನು ಬೇಕಾದರೂ ಮಾಡಬಹುದು ಎಂಬ ಧೋರಣೆ ಬಲಗೊಳ್ಳುತ್ತದೆ. ಆಗ ಮಾನವನು ಉಸಿರಾಡುವ ಗಾಳಿ, ಸೇವಿಸುವ ನೀರು, ತಿನ್ನುವ ಆಹಾರ, ಪ್ರಕೃತಿಯ ಸಿರಿ ಮತ್ತು ಮನುಷ್ಯನ ಅಂಗಾಂಗ ಎಲ್ಲವೂ ಮಾರಾಟದ ಸರಕುಗಳಾಗುತ್ತವೆ! ‘ತನ್ನ ಸೊತ್ತು ಮಾತ್ರವೇ ತನ್ನದಲ್ಲ: ಇತರರ ಸೊತ್ತು ಕೂಡ ತನ್ನದೇ’ ಎಂಬ ಧೋರಣೆಯ ‘ಜಾಗತೀಕರಣ’, ‘ಉದಾರೀಕರಣ’, ‘ಖಾಸಗೀಕರಣ’ದ ನೀತಿಗಳೆಲ್ಲವೂ ಈ ಪಾಪಮೂಲದಿಂದಲೇ ಉತ್ಪನ್ನವಾದ ವಿಷಬೀಜಗಳು! ಗೀತೆಯಲ್ಲಿ ಕೃಷ್ಣನು ಬೋಧಿಸುವ ಮೂರನೇ ಶ್ರೇಣಿಯ ತ್ಯಾಗದಲ್ಲಿ ನಾವು ಬದುಕಿನಲ್ಲಿ ತ್ಯಜಿಸಲೇ – ಬೇಕಾದದ್ದು ಅನಿತ್ಯ ವಸ್ತುಗಳ ಮೇಲೆ ನಮಗಿರುವ ಅತಿಯಾದ ಮೋಹವನ್ನು