ನಿಸ್ವಾರ್ಥ ಸೇವೆಯಲ್ಲಿ ಅಂತರ್ಗತವಾಗಿರುವ ಪ್ರೀತಿ ನಿಷ್ಕಳಂಕವಾದದ್ದು. ಆ ಪ್ರೀತಿಯು ನಿಷ್ಕಳಂಕವಾಗಿರಲು ಮುಖ್ಯ ಕಾರಣ ಅಲ್ಲಿ ತ್ಯಾಗವೇ ಪರಮ ಪ್ರಧಾನವಾಗಿ ವಿಜೃಂಭಿಸುವುದು. ಪ್ರೀತಿ, ತ್ಯಾಗ ಮತ್ತು ಸೇವೆಯ ತ್ರಿವೇಣಿ ಸಂಗಮವಾಗುವಲ್ಲೇ ಈಶ್ವರನೊಂದಿಗೆ ಸಮಾಗಮವು ಸಾಧ್ಯವಾಗುವುದು. ಶಿಕಾಗೋದಲ್ಲಿ ವಿವೇಕವಾಣಿಯ ವಿಜಯ ದುಂದುಭಿಯನ್ನು ಮೊಳಗಿಸಿ ತಾಯ್ತಾಡಿಗೆ ಮರಳಿದ ಸ್ವಾಮಿ ವಿವೇಕಾನಂದರು ಭಾರತದಾದ್ಯಂತ ಜನರಲ್ಲಿ ವಿವೇಕೋದಯ ಉಂಟುಮಾಡುವ ಆಧ್ಯಾತ್ಮಿಕ ಉಪನ್ಯಾಸಗಳನ್ನು ನೀಡುತ್ತಿದ್ದರು ಅಂತಹ ಒಂದು ಸಂದರ್ಭದಲ್ಲಿ ಒಂದೆಡೆ ವಿವೇಕಾನಂದರು ಜಿಜ್ಞಾಸುಗಳಿಗೆ ಸುದೀರ್ಘ ಉಪನ್ಯಾಸವನ್ನು ನೀಡಿದರು. ಬಳಿಕ ಜನರ ಎಲ್ಲ ಪ್ರಶ್ನೆಗಳಿಗೆ, ಸಂದೇಹಗಳಿಗೆ ಯೋಗ್ಯವಾದ ಉತ್ತರ ನೀಡಿದರು. ಸ್ವಾಮೀಜಿಯವರು ಆ ನಡುವೆ ಅನ್ನ, ಆಹಾರ, ನೀರು ಮುಂತಾಗಿ ಏನನ್ನೂ ಸೇವಿಸುವ ಗೋಜಿಗೆ ಹೋಗಲಿಲ್ಲ. ಸ್ವಾಮೀಜಿಯವರಿಂದ ಉತ್ತರ ಪಡೆದ ಬಳಿಕ ಎಲ್ಲರೂ ತಮ್ಮ ತಮ್ಮ ಮನೆಗೆ ಮರಳಿದರು. ಕೊನೆಗೆ ಅಲ್ಲೊಬ್ಬ ಸೀದಾ-ಸಾದಾ ಮನುಷ್ಯ ಆಸೆಯ ಕಂಗಳಿಂದ ಸ್ವಾಮೀಜಿಯವರನ್ನೇ ನೋಡುತ್ತಾ ನಿಂತಿದ್ದ. ವಿವೇಕಾನಂದರು ಆತನನ್ನೂ ತಮ್ಮ ಬಳಿಗೆ ಕರೆದು ‘ನಿನ್ನ ಸಮಸ್ಯೆ ಏನು? ಹೇಳು?’ ಎಂದು ಪ್ರೀತಿಯಿಂದ ನುಡಿದರು. ಅದಕ್ಕೆ ಆ ಭಕ್ತ ಸ್ವಾಮಿ, ಇವತ್ತು ದಿನಪೂರ್ತಿ ನೀವು ಉಪನ್ಯಾಸ ಮಾಡಿದಿರಿ, ಜನರ ಪ್ರಶ್ನೆಗಳಿಗೆ ಉತ್ತರಿಸಿದಿರಿ; ಆದರೆ ಹೊಟ್ಟೆಗೆ ಏನನ್ನೂ ತಿನ್ನಿಲ್ಲ, ಕುಡಿಯಲೂ ಇಲ್ಲ. ನಾನೇನಾದರೂ ಕೊಟ್ಟರೆ ನೀವು ತಿನ್ನುವಿರಾ?’ ಎಂದು ಸಂಕೋಚಪಟ್ಟು ಕೇಳಿದ. ಆತನ ಪ್ರೀತಿಯ ಮಾತಿಗೆ ವಿವೇಕಾನಂದರ ಕಣ್ಣಲ್ಲಿ ಎರಡು ಹನಿ ನೀರು ಉದುರಿತು. ನೀನು ಏನು ಕೊಡುವೆಯೋ ಕೊಡು. ನಾನದನ್ನು ತಿನ್ನುತ್ತೇನೆ’ ಎಂದರು ಸ್ವಾಮೀಜಿ, ಪ್ರೀತಿ, ತ್ಯಾಗ ಮತ್ತು ಸೇವೆಯ ತ್ರಿವೇಣಿ ಸಂಗಮವನ್ನು ಸಾಕ್ಷಾತ್ ಕಂಡ ವಿವೇಕಾನಂದರಿಗೆ ಆ ಭಕ್ತನಲ್ಲಿ ದೇವರೇ ಕಾಣಿಸಿಕೊಂಡರಂತೆ!