ಆಸೆಗಳು ನಮ್ಮನ್ನು ಐಹಿಕ ಜಗತ್ತಿಗೆ ಬಿಗಿಯಾಗಿ ಬಂಧಿಸುತ್ತವೆ. ಫಲಾಪೇಕ್ಷೆಯ ಕರ್ಮಗಳಲ್ಲಿ ನಿರಂತರವಾಗಿ ತೊಡಗಿಸುತ್ತವೆ. ಪರಿಣಾಮವಾಗಿ ಐಶ್ವರ್ಯ, ಅಧಿಕಾರ, ಅಂತಸ್ತು, ಕೀರ್ತಿಯನ್ನು ಸದಾಕಾಲ ಹಂಬಲಿಸುವಂತೆ ಮಾಡುತ್ತವೆ. ಇವುಗಳ ಪ್ರಾಪ್ತಿಯ ಸಲುವಾಗಿ ಮಾತ್ರವೇ ದೇವರನ್ನು ಸಂಪ್ರೀತಿಗೊಳಿಸುವ ಕಾಯಕಕ್ಕೆ ತೊಡಗುತ್ತೇವೆ. ಅದಕ್ಕಾಗಿ ಯಾಗ, ಯಜ್ಞ ಪೂಜೆ, ಪುರಸ್ಕಾರ ಮುಂತಾದ ಕರ್ಮಾನುಷ್ಠಾನಗಳಿಗೆ ಮುಂದಾಗುತ್ತೇವೆ. ಅಷ್ಟೇಲ್ಲಾ ಮಾಡಿಯೂ ಹಂಬಲಿಸಿದ ವಸ್ತುಗಳು ಪ್ರಾಪ್ತವಾಗದೇ ಹೋದಾಗ ದೇವರಲ್ಲಿ ಅಪನಂಬಿಕೆಯನ್ನೂ ಅಶ್ರದ್ಧೆಯನ್ನೂ ತಳೆಯುತ್ತೇವೆ. ಸ್ವಾಮಿ ಶಿವಾನಂದರು ಹೇಳುತ್ತಾರೆ: ಪ್ರತಿಯೊಂದು ಅಪ್ರಿಯ ಘಟನೆಯೂ ದೇವರ ಬಗೆಗಿನ ನಮ್ಮ ವಿಶ್ವಾಸದ ಪರೀಕ್ಷೆಯೇ ಆಗಿರುತ್ತದೆ! ಐಹಿಕ ಜಗತ್ತಿನಲ್ಲಿ ನಾವು ಎಷ್ಟರ ಮಟ್ಟಿಗೆ ‘ಪ್ರವೃತ್ತ ರಾಗಿರುವೆವೋ ಅಷ್ಟರಮಟ್ಟಿಗೆ ನಾವು ಬಂಧನಕ್ಕೆ ಗುರಿಯಾಗಿರುತ್ತೇವೆ. ವಾಸ್ತವವಾಗಿ ಮನುಷ್ಯನು ಅಧಿಕವಾಗಿ ಆಸೆಪಡುವುದು ಕೆಟ್ಟದ್ದೆಂದು ತಿಳಿದ ವಸ್ತುಗಳನ್ನೇ ಎಂದು ಮಹಾತ್ಮಾ ಗಾಂಧೀಜಿಯವರು ಹೇಳುತ್ತಾರೆ. ಹಾಗಾಗಿಯೇ ಆಸೆಗಳು ನಮ್ಮನ್ನು ಐಹಿಕ ಪ್ರಪಂಚಕ್ಕೆ ಗಟ್ಟಿಯಾಗಿ ಬಿಗಿಯುವುದು. ಈ ಬಂಧನದಿಂದ ಮುಕ್ತಿಯನ್ನು ಪಡೆಯಲು ಐಹಿಕ ಜಗತ್ತಿನ ಸಕಲ ವ್ಯವಹಾರಗಳಿಂದ ‘ನಿವೃತ್ತರಾಗುವ ಕಲೆಯನ್ನು ಕರಗತ ಮಾಡಿಕೊಳ್ಳಬೇಕು. ನಾವು ಆಸೆ ಪಡುವ ಭೌತಿಕ ಜಗತ್ತಿನ ಸಕಲ ವಸ್ತುಗಳೂ ಅನಿತ್ಯವಾದವುಗಳು. ನಮ್ಮ ಸಹಿತ ಇಲ್ಲಿನ ಎಲ್ಲವೂ ಮರಳಿ ಪಂಚಭೂತವನ್ನು ಸೇರಲು ಕಾತರಿಸಿವೆ. ಆಸೆಯನ್ನು ತ್ಯಜಿಸುವ ಮೂಲಕ ಭಗವತ್ ಪ್ರೀತಿಯೊಂದೇ ಸತ್ಯ ಎನ್ನುವುದನ್ನು ಅರಿಯಬಹುದು. ಭಗವಂತನ ಪರಮಪುನೀತ ನಾಮವನ್ನು ಉತ್ಸಾಹದಿಂದ ನಿತ್ಯ ಧ್ಯಾನ ಮಾಡುವ ಮೂಲಕ ಈಶ್ವರನ ಭಕ್ತಿಯಲ್ಲಿ ನಮಗಿರುವ ‘ಆಲಸ್ಯ’ವನ್ನು ತ್ಯಜಿಸಬೇಕೆಂಬುದೇ ಗೀತೆಯಲ್ಲಿ ಶ್ರೀಕೃಷ್ಣನು ಬೋಧಿಸಿರುವ ಆರನೇ ಶ್ರೇಣಿಯ ತ್ಯಾಗವಾಗಿದೆ