ನಮ್ಮ ಅಪೇಕ್ಷೆಗೆ ತಕ್ಕಂತೆ ಮತ್ತು ಅನುಕೂಲಕ್ಕೆ ಅನುಗುಣವಾಗಿ ಬಾಹ್ಯ ಜಗತ್ತಿನಲ್ಲಿ ದಿನನಿತ್ಯದ ವಿದ್ಯಮಾನಗಳು ಘಟಿಸುತ್ತಿರಬೇಕೆಂದು ನಾವು ಸಾಮಾನ್ಯವಾಗಿ ಹಂಬಲಿಸುತ್ತೇವೆ. ಆದರೆ ಹಾಗೆ ಆಗುವುದು ದುರ್ಲಭ. ನಮ್ಮಲ್ಲಿರುವ ಸ್ವಾರ್ಥ, ಲೋಭ, ಮೋಹ, ಮದ, ಮತ್ಸರದಿಂದಾಗಿ ಈ ಬಗೆಯ ಏಕಪಕ್ಷೀಯ ಹಂಬಲಗಳು ಉತ್ಪನ್ನವಾಗುತ್ತವೆ ಎನ್ನುವುದನ್ನು ನಾವು ಮರೆಯಬಾರದು. ಇತರರಿಗೆ ಕೆಟ್ಟದಾಗಬೇಕೆಂದು ನಾವು ಬಯಸುವುದಿಲ್ಲ ನಿಜ, ಆದರೆ ನಮಗೆ ಮಾತ್ರ ನಿಶ್ಚಿತವಾಗಿಯೂ ಕೆಟ್ಟದ್ದಾಗದೆ ಒಳ್ಳೆಯದು ಮಾತ್ರವೇ ಆಗಬೇಕೆಂದು ನಾವು ಹಂಬಲಿಸುತ್ತೇವೆ. ಅದಕ್ಕಾಗಿ ದಿನನಿತ್ಯ ದೇವರಲ್ಲಿ ಪ್ರಾರ್ಥಿಸುತ್ತೇವೆ ಕೂಡ! ನಮಗೆ ಒಳ್ಳೆಯದಾಗಲಿ ಎಂಬುದು ನಮ್ಮ ಪ್ರಾರ್ಥನೆಯ ಮೊದಲ ಕೋರಿಕೆಯಾದರೆ ಅನಂತರದಲ್ಲಿ ಎಲ್ಲರಿಗೂ ಒಳಿತಾಗಲಿ ಎಂದು ಕೋರುತ್ತೇವೆ. ಮೊದಲನೇ ಕೋರಿಕೆಯಲ್ಲಿ ಸ್ವಾರ್ಥವೇ ಅಡಗಿರುವುದಾದರೆ ಎರಡನೇ ಕೋರಿಕೆಯಲ್ಲಿ ಆ ಸ್ವಾರ್ಥವನ್ನು ಮರೆ ಮಾಚುವ ಪ್ರಯತ್ನವಿದೆ. ಇನ್ನೂ ಕೆಲವು ಸಂದರ್ಭಗಳಲ್ಲಿ ಹಲವರು ತಮಗೆ ಕೆಡುಕುಂಟು ಮಾಡುವವರಿಗೆ ದೇವರು ನಿನಗೆ ಕೆಟ್ಟದ್ದನ್ನು ಮಾಡಲಿ’ ಎಂದು ಶಾಪವನ್ನೂ ಕೊಡುವುದುಂಟು! ಇಂತಹ ಪ್ರವೃತ್ತಿಯಿಂದ ನಮ್ಮ ಮನಸ್ಸು ವಿಷಮಯವಾಗುವುದಲ್ಲದೇ ಬೇರೇನೂ ಅಲ್ಲ. ಕಷ್ಟಗಳು ಬಂದಾಗ ನಾವು ವಿವೇಕವನ್ನು ಕಳೆದುಕೊಳ್ಳದಿದ್ದರೆ ಇತರರ ಸೌಖ್ಯವನ್ನು ಕಂಡು ಕರುಬುವ ಜಾಯಮಾನ ನಮ್ಮದಾಗುವುದಿಲ್ಲ. ವಿವೇಕವೊಂದಿದ್ದರೆ ಸ್ಥೈರ್ಯ ಮತ್ತು ಧೈರ್ಯವೂ ನಮ್ಮಲ್ಲಿ ಮರೆಯಾಗದು. ಕಷ್ಟಗಳನ್ನು ಎದುರಿಸುವ ಛಲ ಅನಾಯಾಸವಾಗಿ ಮೂಡುವುದು. ನೀತಿ ಮಂಜರಿ ಹೇಳುತ್ತದೆ: ಕಷ್ಟಗಳು ಬಂದಾಗ ವಿವೇಕಿಗಳು ಅಧೀರರಾಗುವುದಿಲ್ಲ. ಮಂದ ಬುದ್ದಿಯವರು ಮಾತ್ರ ಗೋಳಾಡಿ ಸಿಡಿಮಿಡಿಗೊಳ್ಳುತ್ತಾರೆ. ಗಿಡಗಳನ್ನು ಬಗ್ಗಿಸುವ ಸುಂಟರಗಾಳಿ ಕಲ್ಲಿನ ಕಂಬದಲ್ಲಿ ನಡುಕವುಂಟು ಮಾಡದು! ಕಷ್ಟಗಳು ಬಂದಾಗ ನಾವು ಕಲ್ಲಿನ ಕಂಬದಂತೆ ಅಚಲರಾಗಿ ನಿಲ್ಲುವ ವಿವೇಕ ಶಕ್ತಿಯನ್ನು ಹೊಂದಿರಬೇಕು