ಸುಖದ ಕುರಿತಾದ ನಮ್ಮ ಪರಿಕಲ್ಪನೆಯು ಸಂಪೂರ್ಣವಾಗಿ ಐಹಿಕವಾಗಿದೆ. ಹಾಗಾಗಿಯೇ ನಾವು ನಮ್ಮ ದೇಹದ ಸುಖಕ್ಕೆ ಮಹೋನ್ನತ ಸ್ಥಾನವನ್ನು ನೀಡಿದ್ದೇವೆ. ಅಂತೆಯೇ ಪಂಚೇಂದ್ರಿಯಗಳು ನಮ್ಮ ಅನುಭವಕ್ಕೆ ತಂದುಕೊಡುವ ಸುಖವೇ ನಮಗೆ ಪರಮ ಸತ್ಯದ ಸುಖವಾಗಿದೆ. ಇದಕ್ಕೆ ಹೊರತಾದ ಯಾವುದೇ ಸುಖ, ಸಂತೋಷ, ಆನಂದ ಇದ್ದೀತೆಂಬ ಕಲ್ಪನೆಯೇ ನಮ್ಮಲ್ಲಿಲ್ಲ. ಆದರೂ ನಾವು ಗಮನಿಸ ಬೇಕಾದ ವಿಷಯವೊಂದು ಇಲ್ಲಿದೆ. ದೈಹಿಕವಾಗಿ ನಾವು ಅನುಭವಿಸುವ ಸುಖ, ಸಂತೋಷ, ಆನಂದ, ದುಃಖ ಎಲ್ಲವೂ ಒಂದು ನಿರ್ದಿಷ್ಟ ಆರಂಭ ಮತ್ತು ಅಂತ್ಯವನ್ನು ಹೊಂದಿವೆ. ಆದುದರಿಂದಲೇ ಅವು ಅನಿತ್ಯವಾಗಿವೆ. ಕ್ಷಣಿಕವಾಗಿವೆ. ಹಾಗಿದ್ದರೂ ನಾವು ಅವುಗಳ ಇತಿಮಿತಿಯನ್ನು ಗಂಭೀರವಾಗಿ ಪರಿಗಣಿಸುವುದೇ ಇಲ್ಲ, ಅವು ಶಾಶ್ವತವೆಂಬ ಭ್ರಮೆಯಲ್ಲಿ ನಾವು ಬದುಕಿನಲ್ಲಿ ಅವುಗಳ ಬೆನ್ನು ಹತ್ತುತ್ತೇವೆ. ಆ ಸುಖ, ಸಂತೋಷವನ್ನು ಪಡೆಯಲು ಯಾವ ಮಾರ್ಗವನ್ನು ಬೇಕಾದರೂ ಅನುಸರಿಸಲು ನಾವು ಸಿದ್ಧರಾಗುತ್ತೇವೆ. ಬದುಕಿನಲ್ಲಿ ನಾವು ತಪ್ಪಿ ಬೀಳುವುದು ಇಲ್ಲಿಯೇ. ಬಾಹ್ಯ ಜಗತ್ತಿನಲ್ಲಿ ಅನಿತ್ಯವಾದ ಸುಖ, ಸಂತೋಷ, ಅಧಿಕಾರ, ಅಂತಸ್ತು ಕೀರ್ತಿ, ಸಂಪತ್ತಿನ ಬೆನ್ನು ಹತ್ತಿರುವ ನಮಗೆ ಅವೆಲ್ಲವೂ ಕೇವಲ ಮರೀಚಿಕೆ ಎಂಬ ಸತ್ಯದ ಅರಿವಿಲ್ಲ. ಇದಕ್ಕೆ ಕಾರಣವೇನು? ಸ್ವಾಮಿ ವಿವೇಕಾನಂದರು ಹೇಳುವಂತೆ ಬಾಹ್ಯ ಜಗತ್ತಿನ ಕುರಿತಾದ ನಮ್ಮ ಕಲ್ಪನೆ ಅಸತ್ಯದ ಬುನಾದಿಯ ಮೇಲೆ ನಿಂತಿದೆ. ಬಾಹ್ಯ ಜಗತ್ತು ನಮ್ಮ ನೈಜ ಸ್ವಭಾವದ ಛಾಯೆ ಮಾತ್ರ. ಈ ಪ್ರಪಂಚ ನಿಜವೂ ಅಲ್ಲ, ಸುಳ್ಳೋ ಅಲ್ಲ. ಇದೊಂದು ಸತ್ಯದ ಕೇವಲ ಛಾಯೆ. ಈ ಛಾಯೆಯನ್ನೇ ನಿಜವೆಂದು ನಾವು ಭ್ರಮಿಸಿದರೆ ನಮಗೆ ದುಃಖವು ತಪ್ಪಿದ್ದಲ್ಲ. ಸೂಕ್ಷ್ಮವಾಗಿ ನೋಡಿದರೆ ದುಃಖ ಮತ್ತು ಸುಖ ಎರಡೂ ನಮ್ಮ ನೈಜ ಸ್ವಭಾವವನ್ನು ಮರೆ ಮಾಚುವಂತಹದ್ದು. ಆತ್ಮನ ನೈಜ ಸ್ವಭಾವವೆಂದರೆ ಸುಖ ಮತ್ತು ದುಃಖಕ್ಕೆ ಸದಾ ಅತೀತವಾಗಿರುವುದೇ ಆಗಿದೆ.