- ಸ್ವಯಂ ನಿರ್ಬಂಧ
ಗಾಂಧೀಜಿಯವರು ಹೇಳುತ್ತಾರೆ. ‘ಯಾವಾತ ತನ್ನ ಮೇಲೆ ತಾನು ಕಡಿವಾಣ ಹಾಕಲು ಸಮರ್ಥನಿರುತ್ತಾನೋ ಅವನು ಮಾತ್ರವೇ ನಿಜವಾದ ಅರ್ಥದಲ್ಲಿ ಸಾಧಕ, ಸ್ವತಂತ್ರ, ಬಂಧಮುಕ್ತ. ನಮ್ಮ ಮೇಲೆ ನಾವು ಕಡಿವಾಣ ಹಾಕುವುದಕ್ಕಿಂತ ಮಿಗಿಲಾದ ಕಷ್ಟದ ಕೆಲಸ ಬೇರೊಂದಿರಲಿಕ್ಕಿಲ್ಲ. ಇತರರಿಗೆ ಬೋಧಿಸುವುದು ಸುಲಭ. ಆ ಬೋಧನೆಯನ್ನು ಸ್ವಂತ ಬದುಕಿನಲ್ಲಿ ಆಚರಿಸುವುದು ಕಷ್ಟ ಆದುದರಿಂದ ಆಚರಣೆಯೇ ಮೊದಲಾಗಬೇಕು. ಬೋಧನೆ ಅನಂತರ. ಆಗ ಮಾತ್ರವೇ ಬೋಧನೆಗೆ ನೈತಿಕ ಶಕ್ತಿ ಬರುತ್ತದೆ. ನಾವು ನಡೆದಂತೆ ನುಡಿಯುವವರಾಗಬೇಕು. ಆದರೆ ನಾವು ನಡೆಯದೆ ನುಡಿಯುವವರಾಗಿದ್ದೇವೆ! ಕೇವಲ ಉಪದೇಶ ಕೊಡುವವರಾಗಿದ್ದೇವೆ. ನಮ್ಮ ಮೇಲೆ ನಾವು ಕಡಿವಾಣ ಹಾಕಿದ ವಿನಾ ನಾವು ಏನನ್ನೂ ಸಾಧಿಸಲಾರೆವು ಎಂಬ ಸತ್ಯವನ್ನು ಗಾಂಧೀಜಿಯವರು ತಮ್ಮ ಬದುಕಿನಲ್ಲಿ ಕಂಡು ಕೊಂಡದ್ದರಿಂದಲೇ ‘ಸತ್ಯಾಗ್ರಹ’ ಎನ್ನುವುದು ಅವರ ಬತ್ತಳಿಕೆಯಲ್ಲಿನ ಪ್ರಧಾನ ಅಸ್ತ್ರವಾಯಿತು. ಯಾವ ಸಾಧನೆಗೂ ಸ್ವಪ್ರಯತ್ನವೇ ಅಗತ್ಯ, ಇತರರಿಂದ ದೊರಕುವುದು ಮಾರ್ಗದರ್ಶನ ಮತ್ತು ಪ್ರೇರಣೆ ಮಾತ್ರ ಎನ್ನುವ ಸತ್ಯವನ್ನು ಅರಿಯುವುದೇ ಸಾಧನೆಯ ಪಥದಲ್ಲಿನ ಮೊದಲ ಹೆಜ್ಜೆ. ಸ್ವಪ್ರಯತ್ನದಿಂದ ಬದುಕಿನಲ್ಲಿ ಯಶಸ್ಸು ಸಾಧಿಸಬೇಕೆಂದು ಹಾತೊರೆಯುವವರಿಗೆ ಚಿಂತಕ ಆಲ್ಡಸ್ ಹಕ್ಸ್ಲೀ ಧೈರ್ಯ ತುಂಬುವ ಬಗೆ ಹೀಗೆ. ಸ್ವಪ್ರಯತ್ನದಿಂದ ಸರ್ವತೋಮುಖ ಏಳಿಗೆಯನ್ನು ಸಾಧಿಸಬಲ್ಲ ಒಬ್ಬನೇ ಒಬ್ಬ ವ್ಯಕ್ತಿ ಈ ವಿಶ್ವದಲ್ಲಿ ಖಂಡಿತವಾಗಿಯೂ ಇದ್ದಾನೆ ಮತ್ತು ಆ ವ್ಯಕ್ತಿ ಬೇರೆ ಯಾರು ಅಲ್ಲ, ನೀನೇ ಆಗಿರುವೆ’. ಎಂದರೆ ಏನು ಅರ್ಥ? ನಮ್ಮ ಸರ್ವತೋಮುಖ ಏಳಿಗೆಗೆ ನಾವೇ ಸ್ವತಃ ಪ್ರಯತ್ನವನ್ನು ನಡೆಸಬೇಕು. ನಮ್ಮೊಳಗಿನ ಶಕ್ತಿ-ಸಾಮಥ್ರ್ಯವನ್ನು ನಾವು ಕಂಡುಕೊಳ್ಳಬೇಕು, ಅಲ್ಲವೇ?