ಸುಖದ ಕುರಿತಾದ ನಮ್ಮ ಪರಿಕಲ್ಪನೆ ತುಂಬ ಗೊಂದಲಮಯವಾಗಿದೆ. ಆದುದರಿಂದಲೇ ನಾವು ಬದುಕಿನಲ್ಲಿ ಭ್ರಮಾಧೀನರಾಗಿ ಸುಖದ ಬೆನ್ನು ಹತ್ತುತ್ತೇವೆ. ಕೈತುಂಬ ಹಣವಿದ್ದರೆ ಸುಖವಾಗಿ ಬಾಳಬಹುದು ಎಂಬ ಅನ್ನಿಸಿಕೆ ಹಲವರದ್ದು. ನಮ್ಮಲ್ಲಿ ಯಾವುದು ಇಲ್ಲವೋ ಅದರ ಬಗ್ಗೆ ಮಾತ್ರವೇ ನಮಗೆ ತೀವ್ರ ಚಿಂತೆ. ‘ಹಣವೊಂದು ಇದ್ದಿದ್ದರೆ ನಾನು ರಾಜನ ಹಾಗೆ ಬಾಳುತ್ತಿದ್ದೆ’ ಎಂಬುದೇ ನಮ್ಮ ಅನುಗಾಲದ ಉದ್ಧಾರೆ. ನಮ್ಮ ಸುಖವೆಲ್ಲವೂ ಹೊರ ಜಗತ್ತಿನ ವಸ್ತುಗಳಿಂದ, ಸಾಧನಗಳಿಂದ ದೊರೆಯುವುದೆಂಬ ಭಾವನೆ ನಮ್ಮಲ್ಲಿ ಇರುವಷ್ಟು ಕಾಲವೂ ದುಃಖ ನಮಗೆ ತಪ್ಪಿದ್ದಲ್ಲ. ಆ ವಸ್ತುಗಳನ್ನು ಪಡೆಯುವ ತನಕವೂ ದುಃಖ ನಮ್ಮನ್ನು ಕಾಡುವುದು. ಹಾಗಿದ್ದರೂ ಅವುಗಳನ್ನು ಪಡೆದ ಬಳಿಕ ನಮ್ಮ ಕಲ್ಪನೆಯ ಸುಖ ನಮ್ಮ ವಶವಾಗುವುದಿಲ್ಲ! ಆ ವಸ್ತುಗಳ ಇತಿ-ಮಿತಿಗಳು ನಮ್ಮ ಅನುಭವಕ್ಕೆ ಬರುತ್ತಲೇ ದುಃಖದ ಹೊಸ ಅಧ್ಯಾಯ ಆರಂಭಗೊಳ್ಳುವುದು. ಸ್ವಾಮಿ ವಿವೇಕಾನಂದರ ಪ್ರಕಾರ ಈ ಪ್ರಪಂಚ ದಲ್ಲಿ ದುಃಖವಿಲ್ಲದ ಸುಖ ಎಂಬುದಿಲ್ಲ, ಹಾಗೆಯೇ ಪಾಪವಿಲ್ಲದ ಪುಣ್ಯವೆಂಬುದೂ ಇಲ್ಲ. ಇವೆರಡೂ ನಮ್ಮನ್ನು ಐಹಿಕ ಜಗತ್ತಿಗೆ ಬಿಗಿಯಾಗಿ ಬಂಧಿಸುವ ಸರಪಳಿಗಳು. ಮೊದಲನೆಯದು ಕಬ್ಬಿಣದ ಸರಪಳಿಯಾದರೆ ಎರಡನೆಯದು ಚಿನ್ನದ ಸರಪಳಿ. ಈ ಎರಡೂ ಸರಪಳಿಗಳನ್ನು ನಾವು ಕಿತ್ತೆಸೆಯದೆ ಬಂಧ ಮುಕ್ತರಾಗುವುದಿಲ್ಲ. ಹಾಗಿದ್ದರೆ ಚಿನ್ನದ ಸರಪಳಿ ಮತ್ತು ಕಬ್ಬಿಣದ ಸರಪಳಿಯ ಬಂಧನದಿಂದ ಮುಕ್ತರಾಗಲು ನಾವೇನು ಮಾಡಬೇಕು? ಸುಖ-ದುಃಖ, ಪಾಪ-ಪುಣ್ಯಗಳ ಅಪೇಕ್ಷೆಯನ್ನು ಮನದಿಂದ ನಿರ್ಮೂಲನ ಮಾಡಬೇಕು. ಬದುಕಿನಲ್ಲಿ ಸುಖದ ಪ್ರಾಪ್ತಿಗಾಗಿ ದುಃಖವನ್ನು ಅಪ್ಪಿಕೊಳ್ಳಲು ನಾವು ಮುಂದಾಗುತ್ತೇವೆ; ಪುಣ್ಯದ ಗಳಿಕೆಗಾಗಿ ಪಾಪಮಾರ್ಗವನ್ನು ಅನುಸರಿಸಲೂ ಹೇಸುವುದಿಲ್ಲ! ಬಾಹ್ಯ ಜಗತ್ತಿನ ಆಕರ್ಷಣೆಯೇ ಇದಕ್ಕೆ ಹೇತು. ಮಿಥ್ಯಾ ಜಗತ್ತಿನಲ್ಲಿ ನಮ್ಮನ್ನು ಆಕರ್ಷಿಸುವ ಸಕಲ ವಸ್ತುಗಳೂ ದುಃಖಕಾರಕಗಳೆಂಬ ಸತ್ಯವನ್ನು ಅರಿಯುವುದೇ ಇದಕ್ಕೆ ಮಾರ್ಗ.