Home » ಸಮತ್ವದ ಹೋರಾಟ
 

ಸಮತ್ವದ ಹೋರಾಟ

by Kundapur Xpress
Spread the love

ಬೆಟ್ಟದ ಮೇಲೆ ನಿಂತು ಅದರ ಕೆಳಗಿರುವ ಪಟ್ಟಣವನ್ನು ವೀಕ್ಷಿಸುವಾಗ ನಮಗೆ ಇಡಿಯ ಪಟ್ಟಣ ಶಾಂತ, ಸುಂದರ, ಸಬ್ಧವಾಗಿ ಕಾಣುವುದಕ್ಕೆ ಮುಖ್ಯ ಕಾರಣ ನಮಗೂ ಆ ಪಟ್ಟಣಕ್ಕೂ ಇರುವ ಅಂತರ. ಮೇಲ್ನೋಟಕ್ಕೆ ನಮಗದು ಕೇವಲ ಭೌತಿಕ ಅಂತರವಾಗಿ ಕಾಣಬಹುದು. ಆದರೆ ಸೂಕ್ಷ್ಮವಾಗಿ ನೋಡಿದರೆ ಬೆಟ್ಟದ ಮೇಲೆ ನಿಂತ ನಮ್ಮ ಆ ಕ್ಷಣದ ಸ್ಥಿತಿ ಸಂಪೂರ್ಣ ಬಂಧಮುಕ್ತಸ್ಥಿತಿ. ಎಲ್ಲದರ ಸಂಬಂಧವನ್ನು ಕಳಚಿಕೊಂಡ ಸ್ಥಿತಿ. ಯಾವುದನ್ನೂ ಆಸೆ ಪಡದ ಸ್ಥಿತಿ. ಯಾವುದೇ ಭಾವವಿಕಾರವಿಲ್ಲದ ಸ್ಥಿತಿ ಮತ್ತೂ ಸೂಕ್ಷ್ಮವಾಗಿ ನೋಡಿದರೆ ಸಮತ್ವವನ್ನು ಹೊಂದಿದ ಸ್ಥಿತಿ, ಸ್ವಾಮಿ ವಿವೇಕಾನಂದರು ಹೇಳುವಂತೆ ನಿಜವಾದ ಅರ್ಥದಲ್ಲಿ ಸೃಷ್ಟಿ ಎಂದರೆ ಏನನ್ನೂ ಹೊಸದಾಗಿ ಮಾಡುವುದಲ್ಲ, ಸಮತ್ವವನ್ನು ಪಡೆಯುವುದಕ್ಕೆ ನಡೆಸುವ ಒಂದು ಹೋರಾಟ! ಬದುಕಿನ ಜಂಜಾಟದಲ್ಲಿ ನಾವು ನಮಗೆ ಅರಿವಿಲ್ಲದೆ ಮಾಡುತ್ತಿರುವುದು ಇದೇ ಹೋರಾಟವನ್ನು. ಇಂದ್ರಿಯ ಸುಖವನ್ನು ಅನುಭವಿಸುವಾಗಿನ ಸ್ಥಿತಿ ಉನ್ಮತ್ತ ಸ್ಥಿತಿ. ಮನಸ್ಸು ಮತ್ತು ಇಂದ್ರಿಯಕ್ಕೆ ಅತೀತವಾಗಿರುವ ಸ್ಥಿತಿಯೊಂದೇ ಸಮತ್ವದ ಸ್ಥಿತಿ. ಮೋಕ್ಷವೆಂಬ ಗುರಿಯನ್ನು ಸಾಧಿಸಲು ಸಮತ್ವವೆಂಬ ಸನ್ಮಾರ್ಗದಲ್ಲಿ ಸಾಗುವುದು ಅಗತ್ಯ. ಆದರೆ ಬಯಕೆಗಳು, ಕಾಮನೆಗಳು, ಆಸೆ-ಆಕಾಂಕ್ಷೆಗಳು ಈ ಸನ್ಮಾರ್ಗದಲ್ಲಿ ತೆರೆದುಕೊಳ್ಳುವ ಅಡ್ಡ ಹಾದಿಗಳು. ರಾಜಮಾರ್ಗ ಉದ್ದವಾಗಿ ಕಾಣುವಾಗ ಸುಲಭದಲ್ಲಿ ಗುರಿ ತಲುಪುವ ಆಮಿಷದಲ್ಲಿ ಅಡ್ಡಹಾದಿಗಳು ನಮ್ಮನ್ನು ಸೆಳೆಯುತ್ತವೆ. ಆ ಆಮಿಷಕ್ಕೆ ಬಲಿಯಾದರೆ ಮತ್ತೆ ಏಳಿಗೆ ಕಷ್ಟ. ಬದುಕಿನಲ್ಲಿ ಒಮ್ಮೆ ಅಡ್ಡಹಾದಿಯನ್ನು ಹಿಡಿದರೆ ಮತ್ತೆ ರಾಜಮಾರ್ಗಕ್ಕೆ ಬರುವುದು ಬಲುಕಷ್ಟ! ಸಮತ್ವವನ್ನು ಗಳಿಸುವುದೆಂದರೆ ಪಾಪ-ಪುಣ್ಯ, ಸುಖ-ದುಃಖಗಳ ಬಂಧನವನ್ನು ಕಳಚಿಕೊಳ್ಳುವುದೇ ಆಗಿದೆ. ಆದರೆ ಬದುಕಿನ ಗೋಜಲಿನಲ್ಲಿ ನಾವು ದುಃಖವಿಲ್ಲದೆ ಸುಖವನ್ನು ಪಡೆಯಲಾರೆವು. ಪಾಪವಿಲ್ಲದೆ ಪುಣ್ಯವನ್ನು ಪಡೆಯಲಾರೆವು! ಆದುದರಿಂದಲೇ ಬದುಕೆಂದರೆ ಕಳೆದುಕೊಂಡ ಸಮತ್ವವನ್ನು ಮರಳಿ ಪಡೆಯುವ ಒಂದು ದೀರ್ಘ ಹೋರಾಟವೇ ಆಗಿದೆ.

   

Related Articles

error: Content is protected !!