Home » ಆಂತರ್ಯದ ಶಕ್ತಿ
 

ಆಂತರ್ಯದ ಶಕ್ತಿ

by Kundapur Xpress
Spread the love

ತಮಸ್ಸು ಎಂದರೆ ಕತ್ತಲು. ಹೊರಗಿನ ಕತ್ತಲು ಮಾತ್ರವಲ್ಲ ಒಳಗಿನ ಕತ್ತಲು ಕೂಡ ಹೌದು. ಹೊರಗಿನ ಕತ್ತಲು ಹೊರಗಣ್ಣನ್ನು ಕುರುಡುಗೊಳಿಸುವಂತಹದ್ದು. ಒಳಗಿನ ಕತ್ತಲು ಆತ್ಮನನ್ನು ಪೂರ್ಣವಾಗಿ ಮುಚ್ಚಿಬಿಡುವಂತಹದ್ದು. ಅದು ಅಜ್ಞಾನದ ಕತ್ತಲು, ಆ ಕತ್ತಲಲ್ಲಿ ಮನುಷ್ಯ ಹೊರಗೂ ಒಳಗೂ ಸಂಪೂರ್ಣ ಅಂಧ. ಕಣ್ಣಿದ್ದೂ ಕುರುಡು ತನ್ನತನವನ್ನು ಅನುಭವಿಸುವ ಘೋರ ಅಂಧತ್ವ. ಆ ಅಂಧತ್ವದಲ್ಲಿ ವಿಜೃಂಭಿಸುವುದು ಅಸುರೀ ಗುಣವಲ್ಲದೇ ಬೇರೇನೂ ಅಲ್ಲ. ಮೃಗೀಯ ಪ್ರವೃತ್ತಿಗಳೇ ಮೈದುಂಬಿ ಕೊಂಡು ಪಶುಸಮಾನವಾಗಿ ಬದುಕನ್ನು ಆನಂದಿಸುವ ಗುಣವೇ ಅಲ್ಲಿ ವಿಜೃಂಭಿಸುವುದು. ಅಂಥಲ್ಲಿ ಮನುಷ್ಯನು ತನ್ನ ಬದುಕನ್ನು ಮಾತ್ರವಲ್ಲ ತನ್ನ ಬಂಧು ಬಳಗದವರ ಮತ್ತು ತನ್ನೊಡನೆ ಸಂಪರ್ಕಕ್ಕೆ ಬರುವ ಎಲ್ಲರ ಬದುಕನ್ನು ನರಕ ಸದೃಶಗೊಳಿಸುವನು. ಆ ತಮೋಗುಣ ದಿಂದ ಇಡಿಯ ಸಮಾಜಕ್ಕೆ ಕೆಡುಕುಂಟಾಗುವುದು. ಭಗವಂತನ ಈ ಸೃಷ್ಟಿಯಲ್ಲಿ ಮಾನವ ಜನ್ಮವು ಅತ್ಯಂತ ಶ್ರೇಷ್ಠವಾದದ್ದು. ಇಂತಹ ಶ್ರೇಷ್ಠ ಜನ್ಮವನ್ನು ಭಗವಂತನ ಅಪ್ಪಣೆಯಂತೆ ಸರ್ವಶ್ರೇಷ್ಠವಾಗಿ ಕಳೆಯುವ ಧರ್ಮ ನಮ್ಮದಾಗಿದೆ. ಆದರೆ ನಾವು ಪ್ರಕೃತಿಯ ಮಾಯೆಗೆ ಸಿಲುಕಿರುವುದರಿಂದ ನಮ್ಮಲ್ಲಿ ಸಹಜವಾಗಿಯೇ ಸಾತ್ವಿಕ ಗುಣಗಳ ಜತೆಗೆ ರಾಜಸಿಕ ಮತ್ತು ತಾಮಸಿಕ ಗುಣಗಳೂ ಇವೆ. ಪ್ರಕೃತಿಯ ಮಾಯೆಗೆ ಸುಲಭವಾಗಿ ಬಲಿಯಾಗುವ ತಾಮಸಿಕ ಮತ್ತು ರಾಜಸಿಕ ಗುಣಗಳು ಸುಲಭದಲ್ಲೇ ನಮ್ಮಲ್ಲಿ ಸದಾ ವಿಜೃಂಭಿಸುತ್ತಿರುತ್ತವೆ. ಆದರೆ ನಮ್ಮ ಯಾವತ್ತೂ ಪ್ರಯತ್ನ ತಮಸ್ಸನ್ನು ರಜಸ್ಸಿನಿಂದ ಗೆಲ್ಲುವುದಾಗಬೇಕು. ಅದು ಸಾಧ್ಯವಾದಾಗ ರಜಸ್ಸನ್ನು ಸತ್ತ್ವಗುಣದಿಂದ ಗೆಲ್ಲಲು ಸಾಧ್ಯವಾಗುವುದು. ಬದುಕಿನಲ್ಲಿ ಸಮತ್ತ್ವವನ್ನು ಸಾಧಿಸಲು ಈ ಸೂತ್ರವೇ ಅಗತ್ಯ. ಸಾತ್ವಿಕರಾಗುವ ಮೂಲಕ ನಾವು ಆನಂದವನ್ನು ನಮ್ಮ ಒಳಗಿನಿಂದಲೇ ಪಡೆಯಬಹುದು. ನಿಸ್ವಾರ್ಥವಾಗಿ ಪ್ರಪಂಚವನ್ನು ಪ್ರೀತಿಸುವ ಶಕ್ತಿಯನ್ನು ಕೂಡ ಒಳಗಿನಿಂದಲೇ ಪಡೆಯುವೆವು

   

Related Articles

error: Content is protected !!