ಆತನ ನಿಜ ಸ್ವಭಾವವನ್ನು ತಿಳಿಯಬೇಕಾದರೆ ತಮ್ಮಸ್ಸು ಮತ್ತು ರಜೋಗುಣದಿಂದ ಮುಕ್ತರಾಗುವುದು ಅಗತ್ಯ. ಸಾತ್ವಿಕ ಸ್ವಭಾವದಲ್ಲೇ ಆಧ್ಯಾತ್ಮಿಕ ಒಲವು ಮೂಡುತ್ತದೆ. ಬಾಹ್ಯ ಜಗತ್ತಿನ ಆಕರ್ಷಣೆಗಳಿಂದ ಹೊರಬರಲು ಸಾತ್ವಿಕತೆಯನ್ನು ರೂಢಿಸಿಕೊಳ್ಳುವುದು ಮುಖ್ಯ. ಸಾತ್ವಿಕ, ರಾಜಸ ಹಾಗೂ ತಾಮಸ ಗುಣಗಳು ನಮ್ಮಲ್ಲಿ ಅಂತರ್ಗತವಾಗಿವೆ. ಒಂದೊಂದು ಕಾಲದಲ್ಲಿ ಒಂದೊಂದು ಗುಣ ವಿಜೃಂಭಿಸಬಹುದು. ಅದು ಮುಖ್ಯವಾಗಿ ನಮ್ಮ ಶೀಲವನ್ನೇ ಪ್ರತಿನಿಧಿಸುತ್ತದೆ. ಭೋಗಲಾಲಸೆಗಳನ್ನು ಮೈಗೂಡಿಸಿಕೊಂಡಷ್ಟೂ ಮನಸ್ಸು ಸದಾ ಕಾಮನೆಗಳ ಕಣಜವಾಗಿರುವುದು. ಇಂದ್ರಿಯಗಳನ್ನು ತೃಪ್ತಿಪಡಿಸುವುದರಲ್ಲೇ ಸುಖವಿದೆ ಎಂಬ ತಪ್ಪು ಅಭಿಪ್ರಾಯ ನಮ್ಮದು. ಆದರೆ ಆ ಸುಖವು ನಿಜ ಸುಖದ ಕೇವಲ ಪ್ರತಿಬಿಂಬ ಎನ್ನುವ ಸತ್ಯವನ್ನು ನಾವು ಅರಿಯಲಾರೆವು. ಆ ಅರಿವು ಮೂಡಲು ಸಾತ್ವಿಕತೆಯನ್ನು ಮೈಗೂಡಿಸಿ ಕೊಳ್ಳಬೇಕು. ನಡೆ, ನುಡಿ, ಆಹಾರ, ವಿಹಾರ, ಧ್ಯಾನ, ಶ್ರವಣ, ಮನನ, ನಿಧಿಧ್ಯಾಸನ ಗಳಿಂದ ಮೈಗೂಡಿಸಿಕೊಳ್ಳಬಹುದಾದ ಸಾತ್ವಿಕ ಸ್ಥಿತಿಯಲ್ಲಿ ವಸ್ತುವಿನ ನೈಜ ಸ್ವಭಾವವನ್ನು ಅರಿಯಲು ಸಾಧ್ಯ. ಹಾಗೆಯೇ ಆತ್ಮನ ಸ್ವಭಾವವನ್ನು ಕೂಡ. ಮನಸ್ಸು ಭೋಗ ಲಾಲಸೆಯಿಂದ ತುಂಬಿಕೊಂಡಾಗ ಅದು ಶಾಂತವಾಗಿರಲು ಸಾಧ್ಯವಿಲ್ಲ. ಕಾಮನೆಗಳಿಂದ ತುಂಬಿಕೊಂಡ ಮನಸ್ಸು ಸದಾ ಪ್ರಕ್ಷುಬ್ಧವಾಗಿರುವುದು. ‘ನಾನು, ನನ್ನದು’ ಎಂಬ ಪ್ರಜ್ಞೆ ತೀವ್ರವಾಗಿರುವುದು. ಅಹಂಕಾರವೆಂಬ ಪರ್ವತವೇ ತಲೆಯ ಮೇಲಿರುವುದು. ನಿಜಕ್ಕಾದರೆ ಬಾಹ್ಯ ಜಗತ್ತು ಮನುಷ್ಯನ ಅಹಂಕಾರದಿಂದಲೇ ಸೃಷ್ಟಿಗೊಂಡ ಮಿಥ್ಯಾ ಜಗತ್ತಾಗಿದೆ. ಅಹಂಕಾರದಿಂದ ಸೃಷ್ಟಿಗೊಂಡಿರುವ ಈ ಜಗತ್ತಿನಿಂದ ಹೊರ ಬರದೆ ನಾವು ಆತ್ಮನ ಸ್ವಭಾವವನ್ನು ಅರಿಯಲಾರೆವು. ದೇವರ ನಿರಾಕಾರ, ನಿರ್ಗುಣ ಸ್ವರೂಪವನ್ನು ಗ್ರಹಿಸಲಾರೆವು. ದೇವರಿಗೆ ಸಂಪೂರ್ಣವಾಗಿ ಶರಣಾಗದೆ ನಮಗೆ ಮುಕ್ತಿಲಭಿಸದು. ಅದಕ್ಕಾಗಿ ಮೊತ್ತಮೊದಲು ಅಹಂಕಾರವನ್ನು ತ್ಯಜಿಸಬೇಕು. ಈ ಅಹಂಕಾರ ಪೂರ್ತಿಯಾಗಿ ನಾಶವಾಗುವುದು ದೇಹಾಂತ್ಯದಲ್ಲೇ! ಸೂಕ್ಷ್ಮವಾಗಿ ನೋಡಿದರೆ ಸಾವೆಂದರೆ ನಮ್ಮ ಅಹಂಕಾರವನ್ನು ನಾವು ಪೂರ್ತಿಯಾಗಿ ಕಳೆದುಕೊಳ್ಳುವುದೇ ಆಗಿದೆ