Home » ದುರಹಂಕಾರದ ಫಲ
 

ದುರಹಂಕಾರದ ಫಲ

by Kundapur Xpress
Spread the love

ಐಹಿಕ ಬದುಕಿನಲ್ಲಿ ಅಹಂಕಾರವು ನಮ್ಮ ಪರಮ ಶತ್ರು ಎನ್ನುವುದನ್ನು ನಾವು ತಿಳಿದಿರಬೇಕು. ಅಹಂಕಾರವು ನಮ್ಮನ್ನು ಐಹಿಕ ಜಗತ್ತಿಗೆ ಬಿಗಿಯಾಗಿ ಬಂಧಿಸುತ್ತದೆ. ಮಾಯಾ ಪ್ರಪಂಚದ ಜಾಲಕ್ಕೆ ನಮ್ಮನ್ನು ಸಿಲುಕಿಸುತ್ತದೆ. ಪ್ರತಿಯೊಂದು ಕರ್ಮದ ಕರ್ತೃವು ನಾನೇ ಎಂಬ ದುರಭಿಮಾನವನ್ನು ತೀವ್ರಗೊಳಿಸುತ್ತದೆ. ನಾನೇ ಸರ್ವಶಕ್ತ ಎಂಬ ಗರ್ವವನ್ನೂ ತರುತ್ತದೆ. ಅಧಿಕಾರ, ಅಂತಸ್ತು, ಐಶ್ವರ್ಯ, ಕೀರ್ತಿ, ಧನ-ಕನಕಗಳು ಎಷ್ಟು ಬಂದರೂ ಸಾಲದಾಗುತ್ತದೆ. ಫಲದ ಬಯಕೆಯಲ್ಲೇ ಸದಾ ಕರ್ಮಗಳನ್ನು ಕೈಗೊಳ್ಳುವ ಸ್ವಾರ್ಥಪರ ಮನೋಭಾವವನ್ನು ಅದು ವೃದ್ಧಿಸುತ್ತದೆ. ಹೀಗೆ ಐಹಿಕ ಪ್ರಪಂಚಕ್ಕೆ ನಮ್ಮನ್ನು ಬಂಧಿಸಿದಷ್ಟೂ ತೀವ್ರವಾಗಿ ನಾವು ಈ ಮಿಥ್ಯಾ ಜಗತ್ತನ್ನೇ ನಿಜವೆಂದು ಭಾವಿಸಿ ಭ್ರಾಂತರಾಗುತ್ತೇವೆ. ಅದರಿಂದಾಗುವ ನಷ್ಟವೇನು ಎಂಬ ಪ್ರಶ್ನೆ ಮೂಡಬಹುದು. ಐಹಿಕ ಬದುಕಿಗೆ ನಮ್ಮನ್ನು ಎಷ್ಟು ಬಂಧಿಸುವೆವೋ ಅಷ್ಟರಮಟ್ಟಿಗೆ ನಮ್ಮ ಬದುಕನ್ನು ನಾವು ನಿರಂತರ ದುಃಖಕ್ಕೆ ಗುರಿಪಡಿಸುವೆವು. ಸುಖವೆಂಬ ಮರೀಚಿಕೆಯ ಬೆನ್ನು ಹತ್ತಿ ಭೋಗ ಲಾಲಸೆಯೇ ಪ್ರಧಾನವಾಗಿರುವ ಐಹಿಕ ಬದುಕನ್ನು ನೆಚ್ಚಿಕೊಳ್ಳುವವರಿಗೆ ದುಃಖವಲ್ಲದೆ ಬೇರೇನು ಸಿಗುವುದು? ಕ್ಷಣಿಕ ಸುಖದ ನೆರಳಾಗಿ ನಮ್ಮನ್ನು ಕಾಡುವ ದುಃಖ ಮಾತ್ರ ಬಹಳ ದೀರ್ಘವಾದದ್ದು. ಅದು ಕತ್ತಲೆಯ ದಾರಿಯಂತೆ ಬಹಳ ದುರ್ಗಮವೂ ದೂರವೂ ಆದದ್ದು. ನಮ್ಮ ಬದುಕಿನಲ್ಲಿ ನಾವು ಅನುಭವಿಸುವ ಬಹುತೇಕ ಎಲ್ಲ ಕಷ್ಟ-ಕೋಟಲೆಗಳು ನಮ್ಮ ದುರಹಂಕಾರದ ಫಲವಲ್ಲದೆ ಬೇರೇನೂ ಅಲ್ಲ. ತಾಮಸ ಮತ್ತು ರಾಜಸ ಗುಣಗಳಲ್ಲಿ ವಿಜೃಂಭಿಸುವ ಅಹಂಕಾರದ ಮದ ನಮ್ಮ ವ್ಯಕ್ತಿತ್ವವನ್ನೂ ಶೀಲವನ್ನೂ ನಾಶಪಡಿಸಬಲ್ಲಷ್ಟು ಪ್ರಬಲವಾದದ್ದು. ತಾಮಸ ಹಾಗೂ ರಾಜಸ ಗುಣಗಳಿಂದ ಮುಕ್ತರಾಗದೆ ಯಾರಿಗೂ ಅಹಂಕಾರವನ್ನು ನಿವಾರಿಸುವುದು ಅಸಾಧ್ಯ.

   

Related Articles

error: Content is protected !!