ಗೀತೆಯಲ್ಲಿ ಶ್ರೀಕೃಷ್ಣನು ಅರ್ಜುನನಿಗೆ ಬೋಧಿಸುವ ಕರ್ಮಯೋಗವನ್ನು ಪಾಲಿಸಬೇಕಿದ್ದರೆ ಮೊದಲು ಅಹಂಕಾರಕ್ಕೆ ತಿಲಾಂಜಲಿಯನ್ನು ನೀಡುವುದು ಅಗತ್ಯ. ಫಲಾಪೇಕ್ಷೆಯಿಲ್ಲದೆ ಕರ್ಮಗಳಲ್ಲಿ ನಮ್ಮನ್ನು ತೊಡಗಿಸಬೇಕಾದರೆ ಆ ಕರ್ಮಗಳನ್ನು ಮಾಡುವವನು ನಾನೇ ಎಂಬ ದುರಹಂಕಾರವನ್ನು ಮೊತ್ತಮೊದಲು ಕಳಚಿ ಕೊಳ್ಳಬೇಕು. ಎಲ್ಲವೂ ದೇವರ ಲೀಲೆ, ಆತನೇ ನಮ್ಮಿಂದ ಸಕಲ ಕರ್ಮಗಳನ್ನು ಮಾಡಿಸಿಕೊಳ್ಳುವವನು, ನಾವು ಕೇವಲ ನಿಮಿತ್ತ ಮಾತ್ರ. ಆತನೇ ನಿಜವಾದ ಸೂತ್ರಧಾರಿ. ನಾವೆಲ್ಲ ಕೇವಲ ಪಾತ್ರಧಾರಿಗಳು’ ಎಂಬ ಭಾವನೆಯನ್ನು ಆಂತರ್ಯದಲ್ಲಿ ಬೆಳೆಸಿಕೊಳ್ಳಬೇಕಾದರೆ ನಮ್ಮ ಪರಮ ವೈರಿಯಾಗಿ ನಮ್ಮೊಳಗೇ ಮನೆಮಾಡಿಕೊಂಡಿರುವ ದುರಹಂಕಾರವನ್ನು ನಾವು ಒದ್ದೋಡಿಸಬೇಕು. ನಮ್ಮೊಳಗೆ ಜೀವಾತ್ಮನಾಗಿ ನೆಲೆಸಿರುವ ಪರಮಾತ್ಮನನ್ನು ನಾವು ಕಾಣದಂತೆ ಮಾಡುವುದೇ ಈ ದುರಹಂಕಾರವೆಂಬ ಶತ್ರುವಿನ ಕೆಲಸ. ಸದಾ ಅಜ್ಞಾನವೆಂಬ ತಮಸ್ಸಿನಲ್ಲಿ ಮುಳುಗಿರುವಂತೆ ಮಾಡುವುದೇ ಅದರ ಹುನ್ನಾರ. ನಾವೆಲ್ಲರೂ ದೇವರ ಅಂಶವನ್ನೇ ಪಡೆದು ಬಂದಿರುವೆವೆಂಬ ಸತ್ಯವನ್ನು ಅರಿಯಲು ಪ್ರಯತ್ನಿಸಿದರೆ ನಮ್ಮ ಗುರಿ ದೇವರನ್ನು ಸೇರುವುದೇ ಆಗಿದೆ ಎಂಬ ಅಂಶ ನಮಗೆ ಸ್ಪಷ್ಟವಾಗುತ್ತದೆ. ಆದರೆ ಈ ಮಾಯಾ ಜಗತ್ತಿನಲ್ಲಿ ನಮ್ಮ ಮೂಲ ಸಾತ್ವಿಕ ಸ್ವಭಾವವನ್ನು ದುರಹಂಕಾರವು ಮರೆಸುತ್ತದೆ. ಸಮತ್ವದ ಮನೋಭಾವವನ್ನು ಹರಣ ಮಾಡುತ್ತದೆ. ಹಣ, ಮನೆ, ವಸ್ತಾದಿ ಸಮಸ್ತ ವಸ್ತುಗಳು, ಅಧಿಕಾರ, ಅಂತಸ್ತು ಮುಂತಾಗಿ ಎಲ್ಲ ಭೋಗರೂಪೀ ಪದಾರ್ಥಗಳು ಕ್ಷಣ ಭಂಗುರವಾದವುಗಳು ಎಂಬ ಸತ್ಯವನ್ನು ಅರಿಯಲು ನಮ್ಮೊಳಗಿನ ದುರಹಂಕಾರವು ಬಿಡದು. ಆದುದರಿಂದಲೇ ನಿಷ್ಕಾಮ ಕರ್ಮದಲ್ಲಿ ನಮ್ಮನ್ನು ತೊಡಗಿಸಿ ಕೊಳ್ಳುವುದು ಕಷ್ಟಕರವಾಗಿ ಕಾಣುವುದು.