Home » ಸೃಷ್ಟಿಯ ಸ್ವಭಾವ
 

ಸೃಷ್ಟಿಯ ಸ್ವಭಾವ

by Kundapur Xpress
Spread the love

ಬಾಹ್ಯ ಪ್ರಪಂಚದಿಂದ ನಾವೇಕೆ ಅಷ್ಟೊಂದು ಆಕರ್ಷಿತರಾಗುತ್ತೇವೆ ಎಂಬ ಪ್ರಶ್ನೆ ನಿತ್ಯವೂ  ನಮ್ಮನ್ನು ಕಾಡಬಹುದು. ಹೊರಗಿನ ಆಕರ್ಷಣೆಗಳಿಗೆ ನಾವು ತೆರೆದುಕೊಂಡಷ್ಟೂ ಬದುಕು ದುಃಖಮಯವಾಗುವುದೆಂಬ ಸತ್ಯ ನಮ್ಮ ಅನುಭವಕ್ಕೆ ಬರುತ್ತಲೇ ಇರುತ್ತದೆ. ಆದರೂ ನಾವು ಅಂತರ್‌ಮುಖಿಯಾಗಿ ಆ ಬಗ್ಗೆ ಒಂದಷ್ಟು ಹೊತ್ತು ಯೋಚಿಸಲಾರೆವು. ಬಾಹ್ಯ ಆಕರ್ಷಣೆಗಳಿಗೆ ಪಂಚೇಂದ್ರಿಯಗಳು ಸ್ಪಂದಿಸುವ ಪರಿ ಅಷ್ಟು ತೀವ್ರವಾಗಿರಲು ಮುಖ್ಯ ಕಾರಣ ನಾವು ಸಮತ್ವವನ್ನು ಸಾಧಿಸುವಲ್ಲಿ ವಿಫಲರಾಗಿರುವುದು. ಆದರೆ ಸೃಷ್ಟಿಯ ಮೂಲ ಗುಣವೇ ವೈವಿಧ್ಯ. ಅದೆಂದೂ ಸಮತ್ವದ ಲಕ್ಷಣವನ್ನು ಹೊಂದಿಲ್ಲ, ವೈವಿಧ್ಯವೆಂದರೆ ಅನುದಿನವೂ ಅನುಕ್ಷಣವೂ ತನ್ನ ಸ್ವರೂಪವನ್ನು, ಗುಣದೋಷಗಳನ್ನು ಬದಲಿಸುತ್ತಲೇ ಇರುವಂತಹದ್ದು. ಸೃಷ್ಟಿಯ ಸಮಗ್ರ ಜೀವಜಾಲವೇ ವೈವಿಧ್ಯದ ಆಗರ. ಇಂತಹ ವೈಚಿತ್ರವನ್ನು ಹೊಂದಿರುವ ಸೃಷ್ಟಿ ಸಹಜವಾಗಿಯೇ ಮಿಥ್ಯಾಸ್ವರೂಪವನ್ನು ಹೊಂದಿದೆ. ಈ ಮಿಥ್ಯಾಸ್ವರೂಪದ ಸಮ್ಮೋಹಕ್ಕೆ ಗುರಿಯಾಗುವ ಯಃಕಶ್ಚಿತ್ ಮಾನವನಲ್ಲಿ ಪ್ರಕೃತಿಯ ಈ ಸ್ವರೂಪವು ಶಾಶ್ವತವೂ ಅನಂತ ಆನಂದದಾಯಕವೂ ಆಗಿದೆ ಎಂಬ ಭ್ರಮೆ ಇರುವುದು ಸಹಜವೇ. ನಿಜಕ್ಕಾದರೆ ಸೃಷ್ಟಿಯ ಈ ವೈವಿಧ್ಯದ ಆಕರ್ಷಣೆಯಿಂದ ಪಾರಾಗುವುದೇ ಬದುಕಿನ ಬಲು ದೊಡ್ಡ ಸವಾಲು. ಸೃಷ್ಟಿಯ ವೈವಿಧ್ಯದ ಮೂಲ ಸೆಲೆಯಲ್ಲಿ ಸಮತ್ವವೇ ಅಡಗಿದೆ ಎಂದು ಜ್ಞಾನಿಗಳು ಹೇಳುತ್ತಾರೆ. ಅದನ್ನು ಕಾಣಲು ಪ್ರಯತ್ನಿಸುವಲ್ಲಿ ನಮ್ಮ ಅಂತರ್ ದೃಷ್ಟಿಯಲ್ಲೂ ಬಹಿರ್ ದೃಷ್ಟಿಯಲ್ಲೂ ಸಮತ್ವದ ಭಾವ ನೆಲೆಗೊಳ್ಳುವುದು. ಆಗಲೇ ಧರ್ಮ, ಅರ್ಥ, ಕಾಮ, ಮೋಕ್ಷ, ಜೀವನ, ಹುಟ್ಟು, ಸಾವು ಮೊದಲಾದವುಗಳ ಮಹತ್ತ್ವ, ಇತಿ-ಮಿತಿಗಳನ್ನು ಅರಿಯಲು ಸಾಧ್ಯವಾಗುವುದು.

   

Related Articles

error: Content is protected !!