ದೇವರ ಕುರಿತಾಗಿ ಭಯ ಹುಟ್ಟುವುದೆಂದರೆ ಯಾವುದೋ ಗುಮ್ಮನ ಬಗ್ಗೆ ಮಕ್ಕಳು ಹೆದರಿಕೊಂಡಂತೆ ಎಂದು ಅರ್ಥವಲ್ಲ. ದೇವರನ್ನು ಯಃಕಶ್ಚಿತ್ ಮಾನವರಾದ ನಾವ್ಯಾರೂ ನೋಡಿಲ್ಲ ನಿಜ. ಗಾಳಿಯನ್ನು ನಾವು ನೋಡಲು ಸಾಧ್ಯವೇ? ಆದರೆ ಗಾಳಿ ಇದೆ ಎನ್ನುವುದನ್ನು ನಾವು ಅನುಭವದಿಂದ ತಿಳಿದಿರುವೆವು ಹಾಗೆಯೇ ನಮ್ಮ ತಾತ, ಮುತ್ತಾತರನ್ನು ನಾವು ನೋಡಿಲ್ಲವಾದರೂ ಅವರು ಇದ್ದೇ ಇರಲಿಲ್ಲ ಎನ್ನಲು ಸಾಧ್ಯವೇ? ನಮ್ಮ ಪರಿಮಿತ ಜ್ಞಾನದಿಂದ ನಮ್ಮ ಅರಿವು, ತಿಳಿವಳಿಕೆ ಕೂಡ ಪರಿಮಿತವಾಗಿಯೇ ಇದೆ. ನಮಗೆ ತಿಳಿಯದ ಸಂಗತಿಗಳು, ಅನುಭವಿಸದ ವಿಷಯಗಳು ವಾಸ್ತವದಲ್ಲಿ ಇಲ್ಲವೇ ಇಲ್ಲ ಎಂದು ವಾದಿಸುವುದು ಸರಿಯಲ್ಲ. ದೇವರ ಅಸ್ತಿತ್ವವನ್ನು, ನಿರಾಕಾರ, ನಿರ್ಗುಣ ಸ್ವರೂಪವನ್ನು ನಾವು ಕಲ್ಪಿಸಲಾರೆವು. ರಾತ್ರಿಯ ಹೊತ್ತು ಮನೆಯಂಗಳದಲ್ಲಿ ಕುಳಿತು ಸ್ವಲ್ಪ ಕಾಲ ಆಕಾಶಕ್ಕೆ ಮುಖಮಾಡಿ ನಕ್ಷತ್ರ ಲೋಕವನ್ನು ದಿಟ್ಟಿಸಿದರೆ ಸೃಷ್ಟಿಯ ಅನಂತತೆಯ ಬಗ್ಗೆ ನಮ್ಮಲ್ಲಿ ಭಯಂಕರವಾದ ಗೊಂದಲ ಉಂಟಾಗದೇ ಇರದು. ಈ ಬ್ರಹ್ಮಾಂಡದಲ್ಲಿ ನಾವು ಒಂದು ಸಣ್ಣ ಹುಲ್ಲಿನ ಗರಿಕೆಯ ಹಾಗೆ ಎಂಬ ಅರಿವು ಕೂಡ ಮೂಡದೇ ಇರದು. ಆ ಭಯ-ಅರಿವಿನಲ್ಲಿ ನಮ್ಮ ಮಂದೆ ನಿಲ್ಲುವ ಪ್ರಶ್ನೆಗಳು ಹಲವು: ಈ ಅನಂತವಾದ ಸೃಷ್ಟಿಯಲ್ಲಿ ನಾನು ಯಾರು? ಎಲ್ಲಿಂದ ಬಂದೆ? ಹೋಗುವುದೆಲ್ಲಿಗೆ? ಇಲ್ಲಿಗೆ ಬರುವ ಮೊದಲು ಎಲ್ಲಿದ್ದೆ? ಹುಟ್ಟು-ಸಾವು ಎಂದರೇನು? ಸಾವಿನ ಬಳಿಕ ನಾನೇನಾಗುವೆ? ಎಂಬಿತ್ಯಾದಿ ಉತ್ತರ ಸಿಗದ ಪ್ರಶ್ನೆಗಳೇ ನಮ್ಮನ್ನು ಕಾಡುವವು. ಹಾಗೆಯೇ ಅವು ನಮ್ಮನ್ನು ಆಧ್ಯಾತ್ಮಿಕ ಚಿಂತನೆಗೆ ಹಚ್ಚುವವು. ಆತ್ಮಜ್ಞಾನದ ಎದುರು ಲೌಕಿಕ ಜ್ಞಾನ ಗೌಣವೆನಿಸುವುದು. ಆತ್ಮವು ಸುಖ-ದುಃಖಗಳಿಗೆ ಅತೀತವಾದುದೆಂಬ ಅರಿವು ಮೂಡಲು ಕಾರಣವಾಗುವುದು