ಬಾಹ್ಯ ಜಗತ್ತು ಪಂಚೇಂದ್ರಿಯಗಳನ್ನು ಆಕರ್ಷಿಸುವ ಮೂಲಕ ನಮ್ಮನ್ನು ಐಹಿಕ ಪ್ರಪಂಚಕ್ಕೆ ಬಿಗಿಯಾಗಿ ಬಂಧಿಸುವುದಲ್ಲದೆ ನಮ್ಮಲ್ಲಿ ಲೋಭ, ಮೋಹ, ಮದ, ಮತ್ಸರಗಳನ್ನು ತೀವ್ರಗೊಳಿಸುತ್ತದೆ. ಬಾಹ್ಯ ಜಗತ್ತಿನ ಆಕರ್ಷಣೆಯಲ್ಲಿ ನಾವು ಸುಖದ ಬೆನ್ನು ಹತ್ತುವೆವಾದರೂ ಬದುಕಿನಲ್ಲಿ ಸುಖಕ್ಕಿಂತ ದುಃಖಗಳೇ ನಮ್ಮನ್ನು ಹೆಚ್ಚಾಗಿ ಕಾಡಲು ಕಾರಣವೇನು? ನಾವೇನು ಅಷ್ಟೊಂದು ದುರದೃಷ್ಟಶಾಲಿಗಳೇ? ಈ ಬಗೆಯ ಪ್ರಶ್ನೆಗಳು ನಮ್ಮನ್ನು ಸದಾ ಕಾಡುತ್ತವೆ. ಜಗತ್ತು ಅನಿತ್ಯವಾದದ್ದು; ನಿರಂತರ ಬದಲಾವಣೆ ಹೊಂದುತ್ತಿರುವಂತಹದ್ದು ಎಂಬ ಸ್ಪಷ್ಟ ಗ್ರಹಿಕೆ ನಮ್ಮಲ್ಲಿ ಇಲ್ಲದಿರುವುದೇ ನಮ್ಮೆಲ್ಲ ದುಃಖಗಳಿಗೆ ಕಾರಣ. ದೇವರು ನಿರ್ವಿಕಾರನಾದರೆ ಜಗತ್ತು ವಿಕಾರಾತ್ಮಕ ವಾದದ್ದು. ದೇವರನ್ನು ಭಜಿಸಿದಾಗ, ಧ್ಯಾನಿಸಿದಾಗ ನಮ್ಮ ಮನಸ್ಸಿಗೆ ಆಗುವ ಆನಂದ ಚೇತೋಹಾರಿಯಾದುದು. ಅದಕ್ಕೆ ಕಾರಣ ದೇವರನ್ನು ಧ್ಯಾನಿಸುವ ಮೂಲಕ ಮನಸ್ಸಿನ ವಿಕಾರಗಳೆಲ್ಲವೂ ನಾಶವಾಗುವುವು. ಮನಸ್ಸಿನ ಸಮತ್ವ ಇರುವಲ್ಲಿ ಶಾಂತಿ- ಸಮಾಧಾನಗಳಿರುತ್ತವೆ. ಅನಿತ್ಯವಾದ ಜಗತ್ತಿನ ಸ್ವರೂಪ ತದ್ವಿರುದ್ಧ! ಜಗತ್ತಿನೊಳಗಾಗುತ್ತಿರುವ ಬದಲಾವಣೆಗಳನ್ನು ಮನಸು ಸೂಕ್ಷ್ಮವಾಗಿ ಗ್ರಹಿಸದೇ ಹೋದಾಗ ಈ ಜಗತ್ತು ಶಾಶ್ವತವೂ ನಿತ್ಯವೂ ಆದುದೆಂಬ ಭ್ರಮೆಯನು ನಾವು ಬೆಳೆಸಿಕೊಳ್ಳುತ್ತೇವೆ. ನಿರಂತರ ಬದಲಾವಣೆಯನ್ನು ಕಾಣುತ್ತಲೇ ಹೋಗುವ ಈ ಪ್ರಪಂಚದಲ್ಲಿ ಯಾವುದೂ ಇವತ್ತು ಇರುವ ಹಾಗೆ ನಾಳೆ ಇರುವುದಿಲ್ಲ. ಮನುಷ್ಯ ಜೀವನ ಹಾಗೂ ಆತನ ಸಂಬಂಧಗಳು ಕೂಡ ಅಷ್ಟೇ ನಿರಂತರ ಬದಲಾವಣೆಗೆ ಒಳಗಾಗುವುದರಿಂದಲೇ ಜಗತ್ತು ವಿಕಾರಾತ್ಮಕವೆಂದು ಹೇಳುವುದು, ಸಮತ್ವ ಇಲ್ಲದಲ್ಲಿ ಸುಖ- ಸಂತೋಷ ಪ್ರಕಟಗೊಳ್ಳುವ ಪ್ರಶ್ನೆಯೇ ಇಲ್ಲ. ಅನಿತ್ಯವಾದ ಜಗತ್ತಿನ ಮೂಲ ಸ್ವರೂಪವನ್ನು ತಿಳಿಯದೆ ಸುಖ-ಸಂತೋಷದ ಬೆನು ಹತ್ತುವುದೆಂದರೆ ಮಾಯಾಮೃಗದ ಬೆನ್ನು ಹತ್ತಿದಂತೆ!