ವೈವಿಧ್ಯದಲ್ಲಿ ಏಕತೆಯನ್ನು ಕಾಣಲು ಸಾಧ್ಯವಾದರೆ ಮಾತ್ರವೇ ದೇವರು ಎಲ್ಲೆಡೆಯಲ್ಲೂ ಎಲ್ಲದರಲ್ಲೂ ಎಲ್ಲರಲ್ಲೂ ವ್ಯಕ್ತವಾಗಿರುವುದನ್ನು ಕಾಣಲು ಸಾಧ್ಯವಾಗುತ್ತದೆ. ವೈವಿಧ್ಯವನ್ನು ನಿರ್ಮೋಹದಿಂದ ಕಾಣಲು ಸಾಧ್ಯವಾದರೆ ಅದರ ಒಡಲಾಳದಲ್ಲಿರುವ ಏಕತೆಯನ್ನು ಕಾಣಲು ಸಾಧ್ಯವಾಗುವುದು. ಪ್ರಕೃತಿಯ ವೈವಿಧ್ಯ ಮಾರುಹೋಗುವಾಗ ಅದರಲ್ಲಿ ಹುದುಗಿರುವ ಏಕತೆಯ ಸೊಬಗನ್ನು ಕಾಣಲು ಪ್ರಯತ್ನಿಸಬೇಕು ಪ್ರಕೃತಿಯಲ್ಲಿ ಮರಗಳ ವೈವಿಧ್ಯಕ್ಕೆ ಮನಸೋಲುವಾಗ ಮರತ್ವದ ಮಹತ್ವ ನಮ್ಮ ದೃಷ್ಟಿಯಿಂದ ಮರೆಯಾಗಬಾರದು. ಸೃಷ್ಟಿಯಲ್ಲಿ ದೇವರ ಅಭಿವ್ಯಕ್ತಿಯನ್ನು ತಿಳಿಯಲು ಹೊರಗಿನ ಕಣ್ಣುಗಳು ಮಾತ್ರ ಸಾಲವು. ನಮ್ಮ ಅಂತಃಚಕ್ಷು ಕೂಡ ಕೆಲಸ ಮಾಡಬೇಕು. ಹೊರಗಣ್ಣುಗಳಿಂದ ನಮಗೆ ನೋಡಲು ಸಾಧ್ಯವಾಗುವುದು ಪ್ರಕೃತಿಯಲ್ಲಿನ ವೈವಿಧ್ಯವನ್ನು ಮತ್ತು ಅಸಮತೆಯನ್ನು ಮಾತ್ರ. ಆ ವೈವಿಧ್ಯ ಮತ್ತು ಅಸಮತೆ ಸಹಜವಾಗಿಯೇ ನಮ್ಮನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತದೆ. ಆದುದರಿಂದಲೇ ಆ ನೋಟ ನಮ್ಮಲ್ಲಿ ಬೆರಗು ಮತ್ತು ಆಶ್ಚರ್ಯವನ್ನು ಹುಟ್ಟಿಸುತ್ತದೆ. ಈ ಬೆರಗು ಮತ್ತು ಆಶ್ಚರ್ಯ ಎನ್ನುವುದು ಅಜ್ಞಾನದ ಶಿಶು. ಪ್ರಕೃತಿಯ ನೋಟಕ್ಕೆ ನಾವು ಆಕರ್ಷಿತರಾಗುವುದರಲ್ಲಿ ಮತ್ತು ಬೆರಗಾಗುವುದರಲ್ಲಿ ಸುಖವೇ ಇರುವಾಗ ಅಜ್ಞಾನದ ಮಾತೆಲ್ ಎಂಬ ಜಿಜ್ಞಾಸೆ ನಮ್ಮನ್ನು ಕಾಡುವುದು ಸಹಜ. ಪ್ರಕೃತಿಯಿಂದ ಆಕರ್ಷಿತರಾಗಿ ಅದರ ಸೊಬಗಿಗೆ ಮಾರುಹೋಗುವ ನಾವು ನಿಜಕ್ಕೂ ನಮ್ಮ ಇಂದ್ರಿಯಗಳು ಪಡೆವ ಸಂವೇದನೆಯಿಂದ ಮಾಯೆಗೆ ಗುರಿಯಾದೆವೆಂದೇ ತಿಳಿಯಬೇಕು. ಮಾಯೆ ಎಂದರೆ ಯಾವುದು ನಿಜವಲ್ಲವೋ ಅದು ವ್ಯಕ್ತವಾಗಿರುವ ಸ್ಥಿತಿ. ಸೃಷ್ಟಿಯ ವೈವಿಧ್ಯದಲ್ಲಿ ಪ್ರಕಟವಾಗಿರುವುದೆಲ್ಲವೂ ದೇವರ ಅಂಶವೇ ಆಗಿದೆ ಎನ್ನುವಲ್ಲಿ ಅನೇಕತೆಯಲ್ಲಿ ಏಕತೆ ಅಡಗಿದೆ’ ಎಂಬ ಸಂದೇಶವಿದೆ. ಈ ಏಕತೆಯ ಸಂದೇಶವನ್ನು ಪಡೆದಾಗಲೇ ನಮ್ಮಲ್ಲಿರುವ ಎಲ್ಲ ಬಗೆಯ ತಾರತಮ್ಯಗಳು, ಸಂದೇಹಗಳು ನಿವಾರಣೆಗೊಳ್ಳುವುವು.