‘ನ ಹಿ ಜ್ಞಾನೇನ ಸದೃಶಂ ಪವಿತ್ರಮಿಹ ವಿದ್ಯತೇ’ ಎನ್ನುವಲ್ಲಿ ಜ್ಞಾನದ ಶ್ರೇಷ್ಠತೆ ಏನು ಎಂಬುದನ್ನು ಗೀತೆಯಲ್ಲಿ ಶ್ರೀಕೃಷ್ಣ ತಿಳಿಯಪಡಿಸುವ ರೀತಿ ಅನನ್ಯವಾಗಿದೆ. ಜ್ಞಾನಕ್ಕೆ ಸರಿಸಾಟಿಯಾದುದು ಯಾವುದೂ ಇಲ್ಲ. ಇಂಗ್ಲಿಷಿನಲ್ಲಿ ನಾಲೆಜ್ ಈಸ್ ಪವರ್’ ಎನ್ನುವ ಮಾತಿದೆ. ಜ್ಞಾನವೇ ಶಕ್ತಿ ಎಂಬ ಆಂಗ್ಲ ಉಕ್ತಿಯಲ್ಲಿ ಜ್ಞಾನ ಒಂದಿದ್ದರೆ ಬೇರೆ ಯಾವುದೇ ಬಗೆಯ ಸಿರಿ-ಸಂಪತ್ತು, ಅಧಿಕಾರ, ಅಂತಸ್ತಿನ ಅಗತ್ಯವಿಲ್ಲ. ಆದರೆ ಆ ಜ್ಞಾನವು ಯಾವುದು? ಜ್ಞಾನವೆಂದರೆ ನಾವು ಇಂದಿನ ಜಾಗತೀಕರಣದ ದಿನಗಳಲ್ಲಿ ಪರಿಭಾವಿಸುವ ‘ಜ್ಞಾನ’ ಅಲ್ಲವೇ ಅಲ್ಲ. ಇಂದಿನ ಮಾಹಿತಿ ಯುಗದಲ್ಲಿ ಜ್ಞಾನವೆಂಬ ಶಬ್ದದ ವ್ಯಾಪ್ತಿಯನ್ನು ‘ಮಾಹಿತಿ’ ಎನ್ನುವ ಶಬ್ದಕ್ಕೆ ಸೀಮಿತಗೊಳಿಸಲಾಗಿದೆ. ಆದುದರಿಂದ ಇಂದಿನ ಶಿಕ್ಷಣ ಕ್ರಮದಲ್ಲಿ ವಿದ್ಯಾರ್ಥಿಗಳ ಮೆದುಳಿನಲ್ಲಿ ‘ಮಾಹಿತಿ’ಯನ್ನು ತುಂಬಿಸುವಷ್ಟರ ಮಟ್ಟಿಗೆ ಮಾತ್ರವೇ ವಿದ್ಯಾಭ್ಯಾಸಕ್ಕೆ ಮಹತ್ವವನ್ನು ನೀಡಲಾಗುತ್ತದೆ. ಆಧ್ಯಾತ್ಮಿಕ ದೃಷ್ಟಿಯಿಂದ ಜ್ಞಾನವೆಂದರೆ ಆತ್ಮಜ್ಞಾನ. ಆತ್ಮನಲ್ಲಿ ಪ್ರತಿಷ್ಠಾಪಿತರಾಗುವ ಮೂಲಕ ಸಚ್ಚಿದಾನಂದವನ್ನು ಪಡೆಯುವ ಮಹೋನ್ನತ ಗುರಿಯನ್ನು ‘ಜ್ಞಾನ’ ಸಂಪಾದನೆಯು ಹೊಂದಿದೆ. ಯಾವ ಜ್ಞಾನವನ್ನು ಪಡೆಯುವ ಮೂಲಕ ಈ ಪ್ರಪಂಚದ ಸಮಸ್ತ ವಸ್ತುಗಳು ಅನಿತ್ಯವೂ ದುಃಖದಾಯಕವೂ ಆಗಿವೆ ಎಂಬ ಸತ್ಯವನ್ನು ನಾವು ಅರಿಯಲು ಸಾಧ್ಯವೋ ಆ ಜ್ಞಾನವೇ ನಿಜವಾದ ಜ್ಞಾನ. ಅದು ಆಧ್ಯಾತ್ಮಿಕ ದೃಷ್ಟಿಯಿಂದ ಕೇವಲ ಜ್ಞಾನವೆನಿಸಿಕೊಳ್ಳುವುದು. ಕೇವಲವೆಂದರೆ ಸೂಕ್ಷ್ಮವಾದದ್ದು. ನಿರ್ವಿಕಾರವೂ ನಿರ್ಗುಣ, ನಿರಾಕಾರವೂ ಆದ ‘ಆತ್ಮ’ನ ಕುರಿತಾದುದೇ ಆ ಜ್ಞಾನ. ಅದು ಕೇವಲವಾದುದರಿಂದಲೇ ಅದು ಕೈವಲ್ಯವೆನಿಸಿಕೊಂಡಿದೆ. ಸ್ವಾಮಿ ವಿವೇಕಾನಂದರು ಹೇಳುವಂತೆ ‘ಎಲ್ಲ ವ್ಯಕ್ತಿತ್ವದ ಐಕ್ಯವೇ ಆತ್ಮ. ಅದು ಕೂಟ, ಅನಂತ, ನಿರ್ವಿಕಾರಿ. ಆದುದರಿಂದಲೇ ಆತ್ಮನೇ ದೇವರು. ಅದು ಜೀವರೂಪವನ್ನು ಧರಿಸುವುದೇ ವಿನಾ ಸ್ವತಃ ಜೀವವಲ್ಲ; ಸುಖದ ರೂಪವನ್ನು ಧರಿಸುವುದೇ ವಿನಾ ಸ್ವತಃ ಸುಖವಲ್ಲ’!