Home » ಆತ್ಮಜ್ಞಾನದ ತಪಸ್ಸು
 

ಆತ್ಮಜ್ಞಾನದ ತಪಸ್ಸು

by Kundapur Xpress
Spread the love

ಆತ್ಮನೇ ದೇವರಾಗಿದ್ದಾನೆ ಎಂದು ತಿಳಿಯುವುದು ಆತ್ಮಜ್ಞಾನ, ನಿರಾಕಾರವೂ ನಿರ್ಗುಣವೂ ನಿರ್ವಿಕಾರವೂ ಆಗಿರುವ ಆತ್ಮನ ಸ್ವಭಾವ ಸಮತ್ವದಲ್ಲಿ ನೆಲೆ ಗೊಂಡಿರುವುದೇ ಆಗಿದೆ. ನಾವು ಮಾಯೆಯ ಪ್ರಭಾವಕ್ಕೆ ಒಳಗಾಗಿರುವುದರಿಂದ ಆತನ ಅರಿವನ್ನು ಪಡೆಯಲಾರೆವು. ನಮ್ಮ ಇಂದ್ರಿಯಗಳು ಬಹಿರ್ಮುಖಿಯಾಗಿರುವುದರಿಂದ ನಾವು ಬಾಹ್ಯ ಜಗತ್ತಿಗೆ ತೀವ್ರವಾಗಿ ಸ್ಪಂದಿಸುತ್ತಿರುವೆವು. ಸದಾ ಹೊರಗಿನ ಆಕರ್ಷಣೆಗಳಿಂದ ಸೆಳೆಯಲ್ಪಡುತ್ತಿರುವೆವು. ಪರಿಣಾಮವಾಗಿ ಹೊರಗಿನ ಜಗತ್ತೇ ಸತ್ಯವಾದುದು ಮತ್ತು ಶಾಶ್ವತವಾದುದು ಎಂಬ ಭ್ರಮೆಯನ್ನು ಹೊಂದಿರುವೆವು. ಈ ಭ್ರಮೆಯನ್ನು ಹೋಗಲಾಡಿಸುವುದು ಸುಲಭದ ಕೆಲಸವಲ್ಲ. ಆ ಕೆಲಸಕ್ಕೆ ತೊಡಗುವುದೆಂದರೆ ಅದೊಂದು ತಪಸ್ಸೇ ಸರಿ. ಹೊರಗಿನ ಜಗತ್ತಿಗಿಂತಲೂ ಕೋಟಿ ಪಾಲು ದೊಡ್ಡದಾದ ಜಗತ್ತು ನಮ್ಮ ಒಳಗೇ ಇದೆ ಎಂಬುದನ್ನು ಅರಿಯಲು ನಾವು ಅಂತರ್ಮುಖಿಗಳಾಗುವುದು ಅಗತ್ಯ. ಆತ್ಮಜ್ಞಾನ ಪಡೆಯಲು ಅಪೇಕ್ಷಿಸುವವನು ಜಿತೇಂದ್ರಿಯನಾಗಿರ ಬೇಕು. ತತ್ಪರನಾಗಿರಬೇಕು. ಶ್ರದ್ಧಾವಂತನಾಗಿರಬೇಕು. ಹಾಗಿದ್ದರೆ ಮಾತ್ರವೇ ಅವನು ತನ್ನ ತಪಸ್ಸಿನಲ್ಲಿ ಯಶಸ್ಸನ್ನು ಕಾಣುವನು. ಇಂದ್ರಿಯಗಳು ಬಯಸುವ ಸುಖವನ್ನು ಈ ತಪೋಯಜ್ಞದಲ್ಲಿ ತ್ಯಾಗ ಮಾಡಬೇಕು. ಆ ಮೂಲಕವೇ ಅವನು ಜಿತೇಂದ್ರಿಯನಾಗುವನು. ತನ್ನ ತಪಸ್ಸಿನಲ್ಲಿ ರೂಢಿಸಿಕೊಳ್ಳುವ ತತ್ಪರತೆ, ಶ್ರದ್ಧೆಯಿಂದ ಅವನು ಗುರಿಮುಟ್ಟುವನು. ಆ ಮೂಲಕ ಜ್ಞಾನವನ್ನು ಪಡೆದುಕೊಂಡಾಗ ಆತನಿಗೆ ಭಗವತ್ ಸಾಕ್ಷಾತ್ಕಾರವೆಂಬ ಪರಮಶಾಂತಿ ದೊರಕುವುದು. ಒಮ್ಮೆ ಆ ಶಾಂತಿಯನ್ನು ಪಡೆದನೆಂದರೆ ಆತ ಮತ್ತೇನನ್ನೂ ಬಯಸುವುದಿಲ್ಲ ಎಂದು ಶ್ರೀಕೃಷ್ಣನು ಗೀತೆಯಲ್ಲಿ ಹೇಳುವಲ್ಲಿ ಆತ್ಮಜ್ಞಾನ ಗಳಿಕೆಯು ಒಂದು ಉಗ್ರ ತಪಸ್ಸೇ ಆಗಿದೆ ಎನ್ನುವುದು ಸ್ಪಷ್ಟವಾಗುತ್ತದೆ. ಆ ತಪಸ್ಸನ್ನು ಕೈಗೊಳ್ಳುವ ಸಂಕಲ್ಪ ನಮ್ಮದಾಗಬೇಕು. ಸಣ್ಣಮಟ್ಟಿನ ಆರಂಭವಾದರೂ ಸರಿ. ಗುರಿ ಮುಟ್ಟಲು ಕಷ್ಟವಾಗದು!

   

Related Articles

error: Content is protected !!