ಮನಸ್ಸೆಂಬ ಸಾಗರ
ಮನಸ್ಸಿನ ಶಕ್ತಿ ಅದ್ಭುತವಾದದ್ದು. ನಾವು ಏನನ್ನು ತೀವ್ರವಾಗಿ ಆಲೋಚಿಸುತ್ತೇವೋ, ಹಂಬಲಿಸುತ್ತೇವೊ ಅದನ್ನು ಪಡೆಯುವ ಶಕ್ತಿಯನ್ನೂ ಹೊಂದುವೆವು ಎನ್ನುತ್ತಾರೆ ಮನೋಜ್ಞಾನಿಗಳು. ಆದರೆ ಎಷ್ಟೋ ಬಾರಿ ಹಾಗಾಗದಿರುವುದನ್ನೂ ನಾವು ಕಾಣುತ್ತೇವೆ. ಅದಕ್ಕೆ ಕಾರಣ ನಮ್ಮಲ್ಲಿನ ಆತ್ಮವಿಶ್ವಾಸದ ಕೊರತೆಯಲ್ಲದೆ ಬೇರೇನೂ ಅಲ್ಲ. ಈ ಆತ್ಮವಿಶ್ವಾಸದ ಕೊರತೆ ಉಂಟಾದದ್ದಾರೂ ಏತಕ್ಕೆ ಎಂಬುದರ ಬಗ್ಗೆ ನಾವು ಆತ್ಮವಿಮರ್ಶೆ ಮಾಡಿಕೊಳ್ಳಬೇಕಾಗುತ್ತದೆ. ಆಗ ಉತ್ತರ ಕೂಡ ನಮ್ಮೊಳಗೇ ಸಿಗುತ್ತದೆ. ಬದುಕಿನ ಕನಸುಗಳನ್ನು ನನಸು ಮಾಡಲು ನಾವು ಸೋತದ್ದೆಲ್ಲಿ ಎನ್ನುವುದು ಗೊತ್ತಾಗುತ್ತದೆ. ಸ್ವಾಮಿ ವಿವೇಕಾನಂದರು ಒಂದೆಡೆ ಹೇಳುತ್ತಾರೆ, ಯಾವುದೇ ಮಹತ್ಕಾರ್ಯವು ದಿಢೀರೆಂದು ಆಗಲಾರದು. ಸದಾ ಆಲೋಚನೆಗಳಿಂದಲೇ ಮಹತ್ಕಾರ್ಯಗಳು ಸಾಧಿತವಾಗುವವು. ಆದುದರಿಂದ ನೀನು ಸದಾ ಉದಾತ್ತ ಸದ್ವಿಚಾರಗಳನ್ನೇ ಆಲೋಚಿಸಬೇಕು, ಗ್ರಹಿಸಬೇಕು. ಅವುಗಳನ್ನೇ ಅನುದಿನವೂ ಅನುಕ್ಷಣವೂ ಮೆಲುಕು ಹಾಕಬೇಕು. ಆಗ ಖಂಡಿತವಾಗಿಯೂ ಮಹತ್ಕಾರ್ಯದ ಸಾಮಥ್ರ್ಯ ನಿನ್ನಲ್ಲಿ ಪುಟಿದೇಳುತ್ತದೆ! ವಿವೇಕಾನಂದರ ಈ ಅಮೃತವಾಣಿಯಲ್ಲಿ ನಮ್ಮ ಮನಸ್ಸಿನ ಮೂಲ ಸ್ವಭಾವದ ಬಗ್ಗೆ ಸ್ಪಷ್ಟವಾದ ಎಚ್ಚರಿಕೆ ಇದೆ. ಮನಸ್ಸೆನ್ನುವುದು ಸಂಕಲ್ಪ ಶಕ್ತಿಯ ಮಹತ್ಸಾಗರ. ಆದರೆ ಆ ಸಾಗರದಲ್ಲಿ ಬೇಕಿರುವುದು ಬೇಡದಿರುವುದು ಎಲ್ಲವೂ ಇದೆ. ದೇವತೆಗಳು ಮತ್ತು ರಾಕ್ಷಸರು ಸಮುದ್ರ ಮಥನವನ್ನು ಕೈಗೊಂಡಾಗ ಮೊದಲು ಬಂದದ್ದೆಲ್ಲ ಬೇಡದ ವಸ್ತುಗಳು. ಕಟ್ಟ ಕಡೆಗೆ ಬಂದದ್ದು ಅಮೃತ. ನಮ್ಮ ಮನಸ್ಸೆಂಬ ಸಾಗರವೂ ಹಾಗೆಯೇ.