ಸಾಂಸಾರಿಕ ಬಂಧನದಲ್ಲಿ ಇರುವಷ್ಟು ಕಾಲವೂ ನಮಗೆ ಕರ್ಮ ಸನ್ಯಾಸವನ್ನು ತೆಗೆದುಕೊಳ್ಳಲು ಸಾಧ್ಯವಾಗದು. ಕರ್ಮ ಮಾಡುತ್ತಲೇ ಇರುವುದು ಮನುಷ್ಯನ ಮೂಲ ಸ್ವಭಾವ. ಅದನ್ನು ಮಾಡದೇ ಇರಲು ಆತನಿಗೆ ಸಾಧ್ಯವಿಲ್ಲ. ನಾವಿಲ್ಲಿ ಜನಿಸಿ ಬಂದಿರುವುದು ಕೂಡ ದೇವರು ಬಯಸಿದ ಕಾರಣಕ್ಕೆ ಎಂದು ಪುರಾಣ ನಮಗೆ ತಿಳಿಸುತ್ತದೆ. ಆದರೆ ಐಹಿಕ ಜಗತ್ತಿನ ಅನಿತ್ಯ ವಸ್ತುಗಳಿಂದ ತೀವ್ರವಾಗಿ ಆಕರ್ಷಿತರಾಗಿರುವ ನಾವು ಮಾಯೆಯ ಪ್ರಭಾವಕ್ಕೆ ಗುರಿಯಾಗಿರುವುದರಿಂದ ಸುಖ, ಸಂಪತ್ತು ಅಧಿಕಾರ, ಅಂತಸ್ತು, ಕೀರ್ತಿಯನ್ನು ಅರಸುತ್ತಾ ಫಲಾಪೇಕ್ಷೆಯಿಂದ ಕರ್ಮನಿರತರಾಗಿರುವೆವು. ಅಂತೆಯೇ ಸುಖ-ದುಃಖಗಳಿಂದ ನಿರಂತರವಾಗಿ ಬಾಧಿತರಾಗಿರುವೆವು. ನಮ್ಮ ಕರ್ಮಗಳ ದೆಸೆಯಿಂದ ಐಹಿಕ ಸುಖ-ಸಂತೋಷ, ಐಶ್ವರ್ಯ ಪ್ರಾಪ್ತವಾದಾಗ ಹೆಮ್ಮೆಯಿಂದ ಬೀಗುವೆವು. ಅಹಂಕಾರದ ಮುದ್ದೆಗಳಾಗುವೆವು. ಆದರೆ ದುಃಖದಿಂದ ಪೀಡಿತರಾದಾಗ, ಕಷ್ಟಕೋಟಲೆಗಳಿಗೆ ಗುರಿಯಾದಾಗ ಹತಾಶರಾಗಿ ಕರ್ಮಸನ್ಯಾಸದ ಬಗ್ಗೆ ಯೋಚಿಸುವವು. ಸ್ಮಶಾನ ವೈರಾಗ್ಯವನ್ನು ತಾಳುವೆವು. ನಿಜಕ್ಕಾದರೆ ಸುಖ-ದುಃಖಗಳು ನಮ್ಮ ಬದುಕಿನ ಬಲು ದೊಡ್ಡ ಶಿಕ್ಷಕರು. ಸುಖದಿಂದಲೂ ಪಾಠ ಕಲಿಯುವೆವು, ದುಃಖದಿಂದಲೂ ಪಾಠ ಕಲಿಯುವೆವು. ಆದರೆ ದುಃಖವು ಬದುಕಿನಲ್ಲಿ ಕಲಿಸುವ ಪಾಠವನ್ನು ನಾವು ಮರೆಯಲಾರೆವು. ದುಃಖವು ಬದುಕಿನ ವಾಸ್ತವಗಳನ್ನು ನಮಗೆ ತಿಳಿಸುತ್ತದೆ. ಅದರ ಇತಿಮಿತಿಗಳನ್ನು ಸ್ಪಷ್ಟಪಡಿಸುತ್ತದೆ. ಈ ಪ್ರಪಂಚದಲ್ಲಿ ಎಲ್ಲವೂ ಕ್ಷಣ ಭಂಗುರವಾದುವುಗಳು ಎಂಬ ಸತ್ಯಕ್ಕೆ ಕನ್ನಡಿ ಹಿಡಿಯುತ್ತದೆ. ಫಲಾಪೇಕ್ಷೆ ಇಲ್ಲದೆ ಕರ್ಮನಿರತರಾಗುವ ಮೂಲಕ ಮೋಕ್ಷದ ಹಾದಿಯಲ್ಲಿ ಸಾಗಲು ನಮಗೆ ಸಾಧ್ಯವೆಂಬ ಅರಿವನ್ನು ಕೂಡ ಮೂಡಿಸುವಷ್ಟು ಅವು ಪ್ರಬಲವಾಗಿರುತ್ತವೆ. ಸೂಕ್ಷ್ಮವಾಗಿ ನೋಡಿದರೆ ನಮ್ಮ ಬದುಕಿನಲ್ಲಿ ಎದುರಾಗುವ ದುಃಖದುಮ್ಮಾನಗಳೇ ಆತ್ಮನನ್ನು ಮುಸುಕಿರುವ ಅಜ್ಞಾನವೆಂಬ ಪರದೆಯನ್ನು ಸರಿಸುವ ಕೆಲಸವನ್ನು ಮಾಡುತ್ತವೆ.