Home » ಆತ್ಮ ತೃಪ್ತಿ
 

ಆತ್ಮ ತೃಪ್ತಿ

by Kundapur Xpress
Spread the love

ದಿನನಿತ್ಯ ನಾವು ಕೈಗೊಳ್ಳುವ ಎಲ್ಲಾ ಕೆಲಸಗಳನ್ನು ದಕ್ಷತೆಯಿಂದ ಆತ್ಮತೃಪ್ತಿಯಿಂದ ಮಾಡುವುದೇ ಒಂದು ತಪಸ್ಸು, ಆತ್ಮತೃಪ್ತಿಯಲ್ಲಿ ಸಿಗುವ ಮನಸ್ಸಿನ ಆನಂದ, ಸಂತೋಷ ಅಪಾರವಾದುದು. ಅದು ತನು-ಮನವನ್ನು ಬಹಳ ದೀರ್ಘ ಕಾಲ ಮುದಗೊಳಿಸುತ್ತದೆ. ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಆದರೆ ಅಹಂಕಾರವನ್ನು ತರುವುದಿಲ್ಲ.ಸಕಲ ಕರ್ಮಗಳನ್ನು ಕೌಶಲದಿಂದ ಮಾಡಿದಾಗಲೇ ಅಲ್ಲಿ ದಕ್ಷತೆಯು ಪ್ರತಿಫಲಿತವಾಗುವುದು ಆ ದಕ್ಷತೆ ಇರುವಲ್ಲಿ ಆತ್ಮತೃಪ್ತಿ ಉಂಟಾಗುವುದು ಆದರೆ ದಕ್ಷತೆ ಮತ್ತು ಆತ್ಮತೃಪ್ತಿಯನ್ನು ಪಡೆಯುವುದು ಅಷ್ಟು ಸುಲಭದ ಮಾತಲ್ಲ. ನಾವು ಕೈಗೊಳ್ಳುವ ಕಾರ್ಯಗಳು ಸುಲಲಿತವಾಗಿ ಕೌಶಲದಿಂದ ನೆರವೇರಬೇಕಾದರೆ ನಮ್ಮಲ್ಲಿ ಅಹಂಕಾರದ ಭಾವ ಇರಕೂಡದು. ಈ ಕೆಲಸವು ನನ್ನ ಶಕ್ತಿ, ಸಾಮರ್ಥ್ಯ ಹಾಗೂ ಕೌಶಲದಿಂದಲೇ ಸಾಧ್ಯವಾಯಿತೆಂಬ ಅಹಂಭಾವ ಮನಸ್ಸಿನಲ್ಲಿ ಸುಳಿಯಕೂಡದು. ‘ಈ ಕರ್ಮದ ಕರ್ತೃ ನಾನಲ್ಲ; ನಾನು ಕೇವಲ ಉಪಕರಣದ ರೂಪದಲ್ಲಿ ದೇವರ ಆಜ್ಞಾನುವರ್ತಿಯಾಗಿ ಇದನ್ನು ನಿರ್ವಹಿಸುತ್ತಿದ್ದೇನೆ’ ಎಂಬ ಪರಿಶುದ್ಧ ಭಾವ ಮನದೊಳಗೆ ಇದ್ದಲ್ಲಿ ಮಾತ್ರವೇ ಕೈಗೊಳ್ಳುವ ಕೆಲಸದಲ್ಲಿ ತನ್ಮಯತೆ, ಶ್ರದ್ಧೆ ಹಾಗೂ ಆತ್ಮಬಲ ಒಂದುಗೂಡುವುದು ಈ ಮೂರು ಗುಣಗಳು ಸಂಗಮಿಸುವಲ್ಲಿ ಮನಸ್ಸಿನ ಸಮತ್ವವು ನೆಲೆಗೊಳ್ಳುವುದು.ಹಾಗೆ ಸಮತ್ವ ನೆಲೆಗೊಂಡಲ್ಲಿ ಮನಸ್ಸು ಉದ್ವಿಗ್ನವಾಗದು; ಉದ್ರಿಕ್ತತೆಯ ಭಾವ ಒಳ ನುಸುಳದು. ಕೈಗೊಂಡ ಕಾರ್ಯದ ‘ಯಶಸ್ವೀ ರೂವಾರಿ ನಾನೇ ಎಂದು ಬೆನ್ನುತಟ್ಟಿಕೊಳ್ಳುವ ಮೋಹ ಮೈದಳೆಯದು. ಅಂತಹ ಕರ್ಮಗಳು ಸಮಷ್ಟಿ ಹಿತಸಾಧನೆಗೆ ಪೂರಕವಾಗುವುವು. ದೇವರ ಪ್ರೀತ್ಯರ್ಥವಾಗಿಯೇ ಕರ್ಮಗಳನ್ನು ಕೈಗೊಳ್ಳಲು ಸಾಧ್ಯವಾಗುವಲ್ಲಿ ದಕ್ಷತೆ, ಕೌಶಲ ಹಾಗೂ ಸೇವಾ ಮನೋಭಾವದಿಂದ ನಿಷ್ಕಾಮ ಕರ್ಮಯೋಗವು ಕೈಗೂಡುವುದು. ಭಗವದರ್ಪಣದಿಂದ ಕರ್ಮನಿರತರಾಗುವಲ್ಲಿ ಮಾತ್ರವೇ ಆತ್ಮತೃಪ್ತಿ ಲಭಿಸುವುದು. ಅದಕ್ಕಾಗಿ ‘ನಾನು’ ಎಂಬ ಅಹಂಭಾವವನ್ನು ಮೀರಿ ನಿಲ್ಲಲು ಪ್ರಯತ್ನಿಸಬೇಕು.

   

Related Articles

error: Content is protected !!