Home » ಆತ್ಮ ದೇಗುಲ
 

ಆತ್ಮ ದೇಗುಲ

by Kundapur Xpress
Spread the love

ಗೀತೆಯಲ್ಲಿ ಶ್ರೀಕೃಷ್ಣನು ಅರ್ಜುನನಿಗೆ ಹೇಳುತ್ತಾನೆ: ‘ಯಾರು ಕರ್ಮಗಳನ್ನೆಲ್ಲ ಸಮತ್ವ ಬುದ್ಧಿರೂಪೀ ಯೋಗದಿಂದ ಭಗವದರ್ಪಣ ಮಾಡುವರೋ ಮತ್ತು ಯಾರ ಸಂಶಯಗಳೆಲ್ಲ ಜ್ಞಾನದ ಮೂಲಕ ನಾಶವಾಗಿ ಹೋಗುವವೋ ಅಂತಹ ಪರಮಾತ್ಮ ಪರಾಯಣನಾದವನ ಕರ್ಮಗಳು ಬಂಧಿಸಲಾರವು. ಬದುಕಿನಲ್ಲಿ ನಾವು ಫಲಾಪೇಕ್ಷೆಯಿಂದ ಕರ್ಮನಿರತ ರಾಗಿರುವುದರಿಂದಲೇ ಸುಖ-ದುಃಖಗಳೆಂಬ ಅಸಮತೆಯಿಂದ ನಿರಂತರವಾಗಿ ಪೀಡಿತರಾಗಿದ್ದೇವೆ. ಅಧಿಕಾರ, ಅಂತಸ್ತು, ಐಶ್ವರ್ಯದ ಗಳಿಕೆಗಾಗಿ ನಾವು ಕರ್ಮನಿರತರಾಗಿರುವುದರಿಂದ ಸಹಜವಾಗಿಯೇ ನಮ್ಮಲ್ಲಿ ಸ್ವಾರ್ಥ, ಅಹಂಕಾರ ತುಂಬಿಕೊಂಡಿದೆ. ದೇವರ ಅಸ್ತಿತ್ವದ ಬಗ್ಗೆ ನಮಗೆ ಸಂಶಯವಿರಲು ಮುಖ್ಯ ಕಾರಣ ನಮಗಿರುವ ಅಹಂಕಾರ, ಹಾಗಾಗಿ ಬದುಕಿನಲ್ಲಿ ಸೋಲುಂಟಾದಾಗ ನಾವು ಅಧೀರರಾಗುತ್ತೇವೆ. ದೇವರು ಇದ್ದಿದ್ದರೆ ನನಗೆ ಹೀಗಾಗುತ್ತಿರಲಿಲ್ಲ ಎಂದು ಹಲುಬುತ್ತೇವೆ. ದೇವರಲ್ಲಿ ನಮಗೆ ವಿಶ್ವಾಸವಿಲ್ಲದಿರಲು ಕಾರಣ ನಮಗೆ ನಮ್ಮಲ್ಲೇ ವಿಶ್ವಾಸ ಇಲ್ಲದಿರುವುದು! ಹಾಗಾಗಿ ಸದಾ ಸಂಶಯ ಪೀಡಿತರಾಗಿಯೇ ಇರುವೆವು. ಐಹಿಕ ಜೀವನದಲ್ಲಿ ನಾವು ಅನಿತ್ಯವಾದ ಸುಖ-ಭೋಗಗಳನ್ನು ಬಯಸುವುದರಿಂದ ಅದಕ್ಕಾಗಿ ನಮ್ಮ ಮನಸ್ಸಿನ ಶಾಂತಿಸಮಾಧಾನವನ್ನು ಕಳೆದುಕೊಳ್ಳಲು ಸಿದ್ಧರಾಗುವೆವು. ಭ್ರಾಮಕ ವಸ್ತುಗಳ ಹಿಂದೆ ಬಿದ್ದಿರುವ ನಾವು ಸಹಜವಾಗಿಯೇ ಅಜ್ಞಾನಕ್ಕೆ ಗುರಿಯಾಗಿರುವೆವು. ಅನಿತ್ಯವಾದ ಐಶ್ವರ್ಯ, ಅಂತಸ್ತು, ಅಧಿಕಾರ ಹಾಗೂ ಕೀರ್ತಿ ಶಾಶ್ವತವಾದುವೆಂಬ ಭ್ರಮೆಯನ್ನು ಕಟ್ಟಿಕೊಂಡು ಅದಕ್ಕಾಗಿ ಸದಾ ಕಷ್ಟಕೋಟಲೆಗಳಿಗೆ ನಮ್ಮನ್ನು ಗುರಿಪಡಿಸುತ್ತಿರುವೆವು. ಕರ್ಮಬಂಧನದಿಂದಾಗಿ ದುಃಖ-ದುಮ್ಮಾನಗಳನ್ನು ಅನುಭವಿಸುತ್ತಿರುವೆವು. ಆದರೆ ಬದುಕಿನ ಒಂದಲ್ಲ ಒಂದು ಹಂತದಲ್ಲಿ ಈ ಬದುಕೆಷ್ಟು ನಶ್ವರ’ ಎಂಬ ಸತ್ಯ ಹೊಳೆದಾಗ ಆತ್ಮದೇಗುಲದ ಮುಂದೆ ಶಿರಬಾಗಿ ನಿಲ್ಲುವೆವು. ಆತ್ಮಜ್ಞಾನದ ಬೆಳಕಿನಲ್ಲಿ ನಮ್ಮೊಳಗಿನ ದೇವರನ್ನು ಹುಡುಕುವೆವು

   

Related Articles

error: Content is protected !!