ತೋಟದಲ್ಲಿ ಅರಳಿದ ಸುಂದರ ಕೆಂಪು ಗುಲಾಬಿಯನ್ನು ಕಂಡೊಡನೆಯೇ ನಮ್ಮ ಮನಸ್ಸು ಪ್ರಫುಲ್ಲಗೊಳ್ಳುವುದು. ಅದರ ರೂಪ, ರಸ ಹಾಗೂ ಗಂಧ ಮನಸನ್ನು ಆಕರ್ಷಿಸುವುದು. ಅದರ ಸೌಂದರ್ಯವು ಮನಸ್ಸಿನಲ್ಲಿ ತುಂಬಿಕೊಳ್ಳುವುದು. ಮೈಮನದಲ್ಲಿ ಆನಂದ ಉಕ್ಕುವುದು. ಆದರೆ ನಮ್ಮ ರಸಾಸ್ವಾದನೆ ಮಾತ್ರ ಅಲ್ಲಿಗೇ ಮುಗಿಯುವುದಿಲ್ಲ. ಆ ಗುಲಾಬಿಯನ್ನು ಕಿತ್ತು ಕೈಗೆತ್ತಿಕೊಳ್ಳದ ವಿನಾ ನಾವು ಸುಮ್ಮನಿ ರುವುದಿಲ್ಲ. ಆ ಅರಳಿದ ಗುಲಾಬಿ ತೋಟದ ಶೋಭೆಯನ್ನು ಹೆಚ್ಚಿಸುವುದಲ್ಲದೆ ನಮ್ಮ ಹಾಗಿನ ಇನ್ನೂ ಅನೇಕ ರಸಿಕರ ಮನಸ್ಸನ್ನು ತಣಿಸಬಲ್ಲುದು ಎಂಬ ಭಾವನೆ ನಮ್ಮಲ್ಲಿ ಮೂಡುವುದಿಲ್ಲ. ಅಷ್ಟರಮಟ್ಟಿಗೆ ಸ್ವಾರ್ಥವನ್ನು ಮೆರೆಯುವ ನಾವು ಗುಲಾಬಿಯ ಅಂದ ಚಂದ ನಮಗೆ ಮಾತ್ರವಿರಲಿ ಎಂದು ಬಯಸುವೆವು. ಇತರರ ಪಾಲಿಗೂ ಅದು ಇರಲಿ ಎಂದು ನಾವು ಬಯಸೆವು. ಸ್ವಾರ್ಥವನ್ನು ಗೆಲ್ಲದೆ ಇತರರ ಮೇಲೆ ನಾವು ಪ್ರೀತಿಯನ್ನು ತೋರಿಸಲಾರೆವು ಎನ್ನುವುದಕ್ಕೆ ಇದೊಂದು ನಿದರ್ಶನ ಮಾತ್ರ. ನಾವು ಎಷ್ಟರಮಟ್ಟಿಗೆ ಸ್ವಾರ್ಥಿಗಳಾಗಿರುವವೋ ಅಷ್ಟರಮಟ್ಟಿಗೆ ನಾವು ನಮ್ಮಲ್ಲಿ ಪರಮಾತ್ಮನ ಅಂಶವಾಗಿ ನೆಲೆಸಿರುವ ಜೀವಾತ್ಮನಿಂದ ದೂರವಾಗುವೆವು. ಆದುದರಿಂದಲೇ ಇತರರಲ್ಲೂ ನೆಲೆಗೊಂಡಿರುವ ಪರಮಾತ್ಮನ ಅಂಶವನ್ನು ನಾವು ಕಾಣಲಾರೆವು, ನಮ್ಮನ್ನು ನಾವು ದೇಹದಿಂದ ಗುರುತಿಸಿಕೊಳ್ಳುವಷ್ಟು ಕಾಲವೂ ಆತಜ್ಞಾನದಿಂದ ವಂಚಿತರಾಗುವೆವು. ನಮ್ಮ ದೇಹವು ಪಂಚಭೂತಕ್ಕೆ ಸೇರಿದ್ದೆಂಬ ಸತ್ಯವನ್ನಾಗಲೀ ಅದು ಗತಿಸಿದ ಬಳಿಕ ಮತ್ತೆ ಪಂಚಭೂತದಲ್ಲೇ ಲೀನಗೊಳ್ಳುವುದೆಂಬ ನಿಜವನ್ನಾಗಲೀ ಬದುಕಿನ ಉದ್ದಕ್ಕೂ ಅರಿಯಲಾರೆವು. ಆತ್ಮನ ಕುರಿತಾಗಿ ನಮ್ಮಲ್ಲಿರುವ ಅಜ್ಞಾನದ ಮೂಲವೇ ಇದು. ನಾನು ಯಾರು ಎಂಬ ಪ್ರಶ್ನೆಗೆ ಸಾಮಾನ್ಯವಾಗಿ ನಾವು ತಿಳಿದಿರುವ ಉತ್ತರ ‘ಇತರರಿಗೆ ಕಾಣಿಸಿಕೊಳ್ಳುತ್ತಿರುವ ನನ್ನ ರೂಪ (ದೇಹ)ವೇ ನಾನು’ ಎಂಬುದು. ಈ ‘ದೇಹ ಪ್ರಜ್ಞೆಯಿಂದ ಹೊರಬಾರದೆ ನಾವು ಆತ್ಮಜ್ಞಾನದ ಕುರಿತು ಯೋಚಿಸಲಾರೆವು.