ಮಹಾತ್ಮಾ ಗಾಂಧೀಜಿಯವರು ಒಂದೆಡೆ ಹೇಳುತ್ತಾರೆ: ಕೆಟ್ಟದ್ದೆಂದು ತಿಳಿದ ವಸ್ತುವನ್ನೇ ಮಾನವನು ಅಧಿಕವಾಗಿ ಬಯಸುತ್ತಾನೆ. ನಿಜಕ್ಕೂ ಇದೊಂದು ವಿಪರ್ಯಾಸವೇ ಸರಿ ಆದುದರಿಂದಲೇ ನಮ್ಮ ಮನಸ್ಸಿಗೆ ಯಾವುದರಿಂದ ಸುಖ, ಶಾಂತಿ, ನೆಮ್ಮದಿ ಸಿಗುತ್ತದೆ ಎಂಬುದನ್ನು ನಾವು ಸೂಕ್ಷ್ಮವಾಗಿ ತಿಳಿಯಬೇಕು. ಚೆನ್ನಾಗಿ ಉಣ್ಣುವುದರಿಂದ, ತಿನ್ನುವುದರಿಂದ, ಮಜಾ ಉಡಾಯಿಸುವುದರಿಂದ, ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡುವುದರಿಂದ, ಪ್ರವಾಸ ಸುಖ-ಸೌಕರ್ಯದ ವಸ್ತುಗಳನ್ನು ಕೊಳ್ಳುವುದರಿಂದ, ಧನ-ಕನಕ ಗಳಿಸುವುದರಿಂದ – ಹೀಗೆ ನಾನಾ ವಿಧಾನಗಳಿಂದ ಪರೀಕ್ಷಿಸಬೇಕು. ಏಕೆಂದರೆ ನಾವು ಸುಖವನ್ನು ಅಪೇಕ್ಷಿಸಿ ಯಾವ ವಸ್ತುವನ್ನು ಪಡೆಯುವೆವೋ ಅದರ ಗುಣ-ಸ್ವಭಾವಕ್ಕೆ ತಕ್ಕಂತೆ ನಮಗೆ ಆನಂದವು ಸಿಗುತ್ತದೆ. ಕೆಟ್ಟದ್ದರಿಂದ ಉತ್ತಮ ಸುಖವನ್ನು ಹೊಂದುವುದು ಸಾಧ್ಯವಿಲ್ಲ. ಆದುದರಿಂದಲೇ ಹೊರಗಿನ ಯಾವತ್ತೂ ಸುಖ-ಸಾಧನಗಳಿಂದ ಸಿಗುವ ಸಂತೋಷವು ಅದು ಸಿಕ್ಕಿದೊಡನೆಯೇ ಕ್ಷೀಣಿಸುವ ಸೂಚನೆಗಳು ನಮ್ಮ ಮನಸ್ಸಿಗೆ ದೊರಕುತ್ತವೆ. ಹೀಗೆ ಚಿಂತನೆಯನ್ನು ಸೂಕ್ಷ್ಮಗೊಳಿಸುತ್ತಾ ಹೋದ ಹಾಗೆ ಬಾಹ್ಯ ಜಗತ್ತಿನ ಪ್ರಭಾವಕ್ಕೆ ಗುರಿಯಾಗಿ ಸುಖವನ್ನು ಅರಸುವುದು ಅರ್ಥಹೀನ ಎನ್ನುವುದು ಕ್ರಮೇಣ ಗೊತ್ತಾಗುತ್ತದೆ. ಮನಸ್ಸಿನ ಸಮತ್ವವನ್ನು ಹಿಡಿದಿಟ್ಟುಕೊಂಡು ಸ್ಥಿರತೆಯನ್ನು ಸಾಧಿಸುತ್ತಾ ನಿತ್ಯವೂ ಸ್ವಲ್ಪಹೊತ್ತು ದೇವರ ಧ್ಯಾನದಲ್ಲಿ ತೊಡಗಬೇಕು. ಬಾಹ್ಯ ಜಗತ್ತನ್ನು ಸಂಪೂರ್ಣವಾಗಿ ಮರೆತು ದೇವರಲ್ಲೇ ಮನಸ್ಸನ್ನು ಕೇಂದ್ರೀಕರಿಸುವ ಈ ಧ್ಯಾನದಲ್ಲಿ ಮನಸ್ಸು ಗಾಳಿಯಲ್ಲಿ ತೇಲಿದ ಅನುಭವಕ್ಕೆ ಪಕ್ಕ ಆಗುತ್ತದೆ. ಹೊರ ಜಗತ್ತಿನ ನೂರು ಕೋಟಿ ಪಾಲು ದೊಡ್ಡ ಜಗತ್ತು ನಮ್ಮ ಒಳಗೇ ಇದೆ ಎನ್ನುವ ವಿವೇಕ ವಾಣಿಯನ್ನು ಸ್ವಾನುಭವದಿಂದ ಅರಿಯಲು ಪ್ರಯತ್ನಿಸಬೇಕು. ದೇಹಾತೀತರಾಗುವ ಪ್ರಯತ್ನಕ್ಕೆ ತೊಡಗಬೇಕು. ಆ ಮೂಲಕ ಪ್ರಾಪ್ತವಾಗುವ ಜ್ಞಾನವೇ ನಿಜವಾದ ಶಕ್ತಿ ರಮಣ ಮಹರ್ಷಿಗಳು ಹೇಳುವಂತೆ ಆತ್ಮಜ್ಞಾನವೇ ಶಕ್ತಿ, ಶಕ್ತಿಯೇ ಜೀವನ. ಅಜ್ಞಾನವೇ ದೌರ್ಬಲ್ಯ. ದೌರ್ಬಲ್ಯವೇ ಮರಣ


