ದೇಹಕ್ಕೆ ಒದಗುವ ಹುಟ್ಟು-ಸಾವು ನಮ್ಮಲ್ಲಿ ಯಾವುದೇ ರೀತಿಯ ಭಾವ ವಿಕಾರವನ್ನು ಉಂಟುಮಾಡದೇ ಇರಬೇಕಾದರೆ ನಾವು ಐಹಿಕ ಪ್ರಪಂಚದ ಬಂಧನದಿಂದ ಹೊರಬರಲು ಪ್ರಯತ್ನಿಸಬೇಕು. ಐಹಿಕ ಸುಖವೇ ನಿಜವಾದ ಸುಖ ವೆಂಬ ಭ್ರಮೆಯಿಂದ ಮುಕ್ತರಾಗಲು ಪ್ರಯತ್ನಿಸಬೇಕು. ಭೌತಿಕ ಪ್ರಪಂಚದ ಆಕರ್ಷಣೆಗಳಿಂದ ಹೊರಬರಬೇಕು. ಆದರೆ ಅದು ಅಷ್ಟು ಸುಲಭವೇ? ನಿಷ್ಕಾಮ ಕರ್ಮಯೋಗಿಯಾದವನಿಗೆ ಅದು ಸಾಧ್ಯ ಎಂಬ ಆಶ್ವಾಸನೆ ನಮಗೆ ಗೀತೆಯಲ್ಲಿ ಶ್ರೀಕೃಷ್ಣನಿಂದ ಸಿಗುತ್ತದೆ. ಸಕಾಮಿ ಪುರುಷನು ಫಲದಲ್ಲಿ ಆಸಕ್ತನಾಗಿ ಕಾಮ ಪ್ರೇರಣೆಯಿಂದ ಐಹಿಕ ಜಗತ್ತಿಗೆ ಬಿಗಿಯಾಗಿ ಬಂಧಿಸಲ್ಪಡುತ್ತಾನೆ ಎಂಬ ಎಚ್ಚರಿಕೆಯನ್ನು ನೀಡುವ ಶ್ರೀಕೃಷ್ಣನು ಕರ್ಮಗಳ ಫಲವನ್ನು ಪರಮಾತ್ಮನಿಗೆ ಸಮರ್ಪಿಸುವ ನಿಷ್ಕಾಮ ಕರ್ಮಯೋಗಿಯು ಭಗವತ್ ಸಾಕ್ಷಾತ್ಕಾರ ರೂಪೀ ಶಾಂತಿಯನ್ನು ಪಡೆಯುತ್ತಾನೆ ಎಂಬ ಭರವಸೆಯನ್ನು ನೀಡುತ್ತಾನೆ. ಬಾಹ್ಯ ಜಗತ್ತಿಗೆ ನಮ್ಮನ್ನು ನಾವು ಬಿಗಿದುಕೊಂಡಷ್ಟೂ ನಮ್ಮಲ್ಲಿನ ದೌರ್ಬಲ್ಯಗಳು ಹೆಚ್ಚುತ್ತವೆ. ಅದಕ್ಕೆ ಮುಖ್ಯಕಾರಣ ನಮ್ಮೆಲ್ಲ ಸುಖ-ಸಂತೋಷಗಳು ಹೊರ ಜಗತ್ತಿನಲ್ಲೇ ಇವೆ ಎಂಬ ನಮ್ಮ ಭ್ರಮೆ. ಅದಕ್ಕಾಗಿ ನಾವು ನಿರಂತರ ಹುಡುಕಾಟಕ್ಕೆ ತೊಡಗಿರುತ್ತೇವೆ. ಐಶ್ವರ್ಯ, ಅಧಿಕಾರ, ಅಂತಸ್ತಿನಲ್ಲೇ ಸುಖ-ಶಾಂತಿಯನ್ನು ಅರಸುತ್ತೇವೆ. ಆದರೆ ಆತ್ಮವನ್ನು ಮುಸುಕಿಕೊಂಡಿರುವ ಅಜ್ಞಾನವನ್ನು ಹೋಗಲಾಡಿಸದೆ ಬಾಹ್ಯ ಜಗತ್ತಿನ ವಸ್ತುಗಳು ಅನಿತ್ಯವೆಂಬ ಸತ್ಯವನ್ನು ನಾವು ಅರಿಯಲಾರೆವು. ಅನಿತ್ಯವಾದ ವಸ್ತುಗಳಿಂದ ಸಿಗುವ ಸುಖ-ಶಾಂತಿ ಕ್ಷಣಿಕವಾದುವೆಂಬ ಸತ್ಯವನ್ನು ಅರಿಯಲು ಬದುಕಿನಲ್ಲಿ ಭ್ರಮನಿರಸನವಾಗುವುದು ಅಗತ್ಯ. ಹಾಗೆ ಭ್ರಮನಿರಸನವಾಗುವ ತನಕವೂ ಅನಿತ್ಯವಾದ ವಸ್ತು ಗಳನ್ನು ಅತಿಯಾಗಿ ಮೋಹಿಸುವೆವು. ಬದುಕಿನ ಕ್ಷಣಭಂಗುರತೆಯ ಅರಿವಾದೊಡನೆಯೇ ಅನ್ವೇಷಣೆಯಲ್ಲಿ ತೊಡಗಲು ನಾವು ಅಂತರ್ ಮುಖಿಗಳಾಗುತ್ತೇವೆ. ಆತ್ಮಜ್ಞಾನದ ಬೆಳಕನ್ನು ಅರಸುತ್ತೇವೆ