ಆತ್ಮಜ್ಞಾನದ ಬೆಳಕನ್ನು ನಮ್ಮೊಳಗೆ ಅರಸಬೇಕಾದರೆ ನಾವು ಹೊರ ಜಗತ್ತಿನ ಅಜ್ಞಾನವೆಂಬ ಕತ್ತಲೆಯಲ್ಲಿ ಗೊತ್ತು ಗುರಿಯಿಲ್ಲದೆ ನಡೆಸುವ ನಮ್ಮ ಸುತ್ತಾಟವನ್ನು ಕೊನೆಗೊಳಿಸಬೇಕು. ಆ ಸುತ್ತಾಟವು ಗೊತ್ತುಗುರಿ ಇಲ್ಲದೆ ಇರಲು ಕಾರಣ ನಾನು ನಾನೆಂಬ ಅಹಂಕಾರದಲ್ಲಿ ದೇವರನ್ನು ಮರೆತು ಬಾಳುತ್ತಿರುವುದೇ ಆಗಿದೆ. ಜೀವನದಲ್ಲಿ ಕಷ್ಟಗಳು ಎದುರಾಗಲು ಕಾರಣ ನಾವೇ ಹೊರತು ದೇವರಲ್ಲ. ನಾವು ಸರ್ವಶಕ್ತರು ಎಂಬ ಅಹಂಕಾರವೇ ನಮಗೆ ಮುಳುವಾಗಿದೆ. ಬದುಕಿನಲ್ಲಿ ಕಷ್ಟಗಳು ಬಂದಾಗ ಅವುಗಳ ನಿವಾರಣೆಗಾಗಿ ದೇವರನ್ನು ನೆನೆಯುವ ನಾವು ಐಹಿಕ ಸುಖ-ಸಂಪತ್ತನ್ನು ಕರುಣಿಸಬೇಕೆಂದು ಬೇಡುವೆವಲ್ಲದೆ ದೇವರ ಪರಮ ಸಾನ್ನಿಧ್ಯವನ್ನಲ್ಲ, ಐಹಿಕ ಸುಖ-ಸಂಪತ್ತು ಕ್ಷಣಿಕವಾದುದರಿಂದ ಅವುಗಳಿಂದ ಸಿಗುವ ಆನಂದವೂ ಕ್ಷಣಿಕವಾಗಿದೆ. ಪರಮಾತ್ಮನಲ್ಲಿ ನಿಜವಾದ ಶ್ರದ್ಧಾಭಕ್ತಿಯನ್ನು ಬೆಳೆಸಿಕೊಂಡದ್ದೇ ಆದಲ್ಲಿ ಇಡಿಯ ಸೃಷ್ಟಿಯಲ್ಲಿ ಪರಮಾತ್ಮನ ಅಂಶವನ್ನಲ್ಲದೆ ಬೇರೇನೂ ಕಂಡುಬರದು. ಅಂತೆಯೇ ಸಮಸ್ತ ಸೃಷ್ಟಿಯನ್ನು ಪ್ರೀತಿ-ಮಮತೆಯಿಂದ ಕಾಣುವ ನಿರ್ಮಲ ಮನಸ್ಸು, ಹೃದಯ ನಮ್ಮಲ್ಲಿರುವುದು. ಅಂತಹ ನಿರ್ಮಲವಾದ ಮನಸ್ಸು ಇಂದ್ರಿಯಗಳ ಮೇಲೆ ಸಹಜವಾಗಿಯೇ ಹತೋಟಿಯನ್ನು ಹೊಂದಿರುವುದು. ಪರಮಾತ್ಮನ ಅಂಶವಾಗಿ ನಮ್ಮಲ್ಲಿ ನೆಲೆಸಿರುವ ಜೀವಾತ್ಮನೊಡನೆ ನೇರವಾದ ಸಂಪರ್ಕ-ಸಂವಹನವನ್ನು ಹೊಂದಲು ಸಾಧ್ಯವಾಗುವುದು. ಎಲ್ಲಿ ದೇವರ ಸಾನ್ನಿಧ್ಯ ಇರುವುದೋ ಅಲ್ಲಿ ಎಲ್ಲವೂ ಸ್ವಚ್ಛ, ಸುಂದರ, ಶಾಂತವಾಗಿರುವುದು. ಅಲ್ಲಿ ಕಾಮನೆಗಳ ಬಂಧನವಿರುವುದಿಲ್ಲ. ನಿಷ್ಕಾಮ ಕರ್ಮಯೋಗಿಗಳಾಗುವ ಮೂಲಕ ದೇಹ, ಮನಸ್ಸು, ಬುದ್ಧಿ ಹಾಗೂ ಆತ್ಮಸಂಪೂರ್ಣವಾಗಿ ದೇವರ ಆಲಯವೇ ಆಗಿ ಪರಿವರ್ತಿತವಾಗುವಲ್ಲಿ ದೇವರು ಸ್ವಯಂ ವಿರಾಜಮಾನನಾಗುವನು. ಶ್ರೇಷ್ಠವಾದ ಮನುಷ್ಯ ಜನ್ಮವನ್ನು ಪಡೆದು ಬಂದಿರುವ ನಮ್ಮ ಜೀವನದ ಗುರಿಯೇ ದೇವರನ್ನು ಸೇರುವುದು ಮತ್ತು ಅದಕ್ಕಾಗಿ ಹುಟ್ಟು-ಸಾವಿನ ಚಕ್ರದಿಂದ ಪಾರಾಗುವುದೇ ಆಗಿದೆ.