ಬದುಕಿನಲ್ಲಿ ನಾವು ಎಲ್ಲ ವಿಷಯಗಳಲ್ಲೂ ಸ್ವಾರ್ಥಿಗಳಾಗಿರಲು ಕಾರಣವೇನು? ಈ ಪ್ರಶ್ನೆಯನ್ನು ನಮಗೆ ನಾವೇ ಕೇಳಿಕೊಳ್ಳಬೇಕು. ನಿತ್ಯವೂ ಕೇಳಿಕೊಳ್ಳಬೇಕು. ಆ ಮೂಲಕ ಆತ್ಮವಿಮರ್ಶೆಗೆ ತೊಡಗಬೇಕು. ಎಷ್ಟು ಸಾಧ್ಯವೋ ಅಷ್ಟು ಹೆಚ್ಚು ಹಣವನ್ನು ಗಳಿಸಬೇಕು; ಐಶ್ವರ್ಯವನ್ನು ಪಡೆಯಬೇಕು; ಭೂಮಿ, ನಗ-ನಗದನ್ನು ಸಂಗ್ರಹಿಸಬೇಕು; ತಾನು ಮಾತ್ರವಲ್ಲ, ತನ್ನ ಮಕ್ಕಳು-ಮರಿಮಕ್ಕಳು ಕೂಡ ಕೂತು ಉಣ್ಣುವಷ್ಟು ಐಶ್ವರ್ಯವನ್ನು ಸಂಪಾದಿಸಬೇಕು; ಮನೆಯಲ್ಲಿ ಇರುವವರ ಸಂಖ್ಯೆ ಎಷ್ಟೇ ಇರಲಿ – ಎಷ್ಟು ಸಾಧ್ಯವೋ ಅಷ್ಟು ದೊಡ್ಡ ಬಂಗಲೆಯನ್ನು ಕಟ್ಟಬೇಕು ಸಾಮಾನ್ಯ ಕಾರೊಂದು ಇದ್ದರೆ ಸಾಲದು, ಇರುವ ಪೈಕಿ ದೊಡ್ಡದಾದ ಐಶಾರಾಮಿನ ಕಾರು ಇರಬೇಕು ಹೀಗೆ ನಮ್ಮ ಸ್ವಾರ್ಥಪರ ಚಿಂತನೆಗೆ ಕೊನೆ ಮೊದಲಿಲ್ಲ. ಅಧಿಕಾರ, ಅಂತಸ್ತು, ಸಂಪತ್ತಿಗೆ ಸಂಬಂಧಿಸಿರುವ ನಮ್ಮ ಸ್ವಾರ್ಥಪರತೆಯಲ್ಲಿ ನಮ್ಮ ಅನುಭೋಗದ ಬಯಕೆಗೂ ಮೀರಿದ ಸ್ವಾರ್ಥವಿದೆ. ಅದೆಂದರೆ ‘ಇತರರು ಅಸೂಯೆಪಡುವಷ್ಟು ಸಂಪತ್ತು ನನ್ನಲ್ಲಿರಬೇಕು’ ಎಂಬುದೇ ಆ ಮಹಾಸ್ವಾರ್ಥ. ಆದರೆ ಸಂಪತ್ತಿನ ವಿಚಿತ್ರ ಗುಣವೇನೆಂದರೆ ಅದು ಸಮೃದ್ಧಿಗಿಂತಲೂ ಅಭಾವದ ಕೊರಗನ್ನೇ ನಮ್ಮಲ್ಲಿ ಹುಟ್ಟಿಸುವುದು. ಆದುದರಿಂದಲೇ ಸುಖಕ್ಕಿಂತ ದುಃಖದ ಭಾವವನ್ನೇ ಅದು ಹೆಚ್ಚಿಸುವುದು! ಅದಕ್ಕೆಂದೇ ಸ್ವಾಮಿ ವಿವೇಕಾನಂದರು ಹೇಳುತ್ತಾರೆ: ‘ಸ್ವಾರ್ಥವಿಲ್ಲದಿರುವಿಕೆಯೇ ಅಧಿಕ ಫಲವನ್ನು ಕೊಡುತ್ತದೆ. ಆರೋಗ್ಯದ ದೃಷ್ಟಿಯಿಂದಲೂ ಇದು ಸತ್ಯ.’ ಸಂಪತ್ತಿನ ಸಮೃದ್ಧಿ ಮತ್ತಷ್ಟು ತೃಷೆಯನ್ನು ಹೆಚ್ಚಿಸುವುದಲ್ಲದೆ ತೃಪ್ತ ಭಾವವನ್ನು ಎಂದೂ ಹುಟ್ಟಿಸುವುದಿಲ್ಲ. ಆದುದರಿಂದಲೇ ದಾಸರು ಹೇಳುತ್ತಾರೆ: ‘ಸಾಕು ಸಾಕು ಎನ್ನುವವನೇ ಸಿರಿವಂತ; ಬೇಕು ಬೇಕು ಎನ್ನುವವನೇ ಬಡವ. ಐಹಿಕ ಜಗತ್ತಿಗೆ ಅಂಟಿಕೊಂಡಿರುವ ನಮಗೆ ಬದುಕಿನಲ್ಲಿ ಸಂಪತ್ತಿನಿಂದಲೇ ಸುಖ-ಸಂತೋಷ ಲಭಿಸುವುದೆಂಬ ಭ್ರಮೆ ಕಾಡುವುದು ಸಹಜವೇ. ಆರ್ಥಿಕ ಭದ್ರತೆಯ ದೃಷ್ಟಿಯಿಂದ ಅದು ಅನಿವಾರ್ಯ ಎಂಬ ಭಾವನೆ ಹಲವರದ್ದು. ಆದರೆ ಅಭದ್ರತೆಯ ಭಯವೇ ಇದರ ಮೂಲ. ಅದು ಮೊಳಕೆಯೊಡೆಯುವುದು ಕೂಡ ನಮ್ಮ ಮನಸ್ಸಿನಾಳದಲ್ಲೇ.