ನಾವುಸ್ವಾರ್ಥಪರರಾದಷ್ಟೂ ನಮ್ಮಲ್ಲಿನ ಸಂಗ್ರಹ ಬುದ್ದಿ ತೀವ್ರಗೊಳ್ಳುವುದು. ಸಂಪತ್ತು ಗಳಿಕೆಯೇ ಪ್ರಧಾನವಾಗುವುದು.ಅಧಿಕಾರ, ಅಂತಸ್ತನ್ನು ಗಳಿಸುವ ಹುಚ್ಚು ಅದನ್ನು ಬೆನ್ನಟ್ಟಿಕೊಂಡೇ ಬರುವುದು. ಕೊನೆಗೆ ಕೀರ್ತಿಯಕಾಮನೆ ತೀವ್ರಗೊಳ್ಳುವುದು. ಸಂಪತ್ತು, ಅಧಿಕಾರ, ಅಂತಸ್ತು, ಕೀರ್ತಿ ಎನ್ನುವುದು ವಿಷವರ್ತುಲವಾಗಿನಮ್ಮನ್ನು ಆವರಿಸಿಕೊಂಡು ಬದುಕನ್ನು ಅದು ಮತ್ತಷ್ಟು ಸ್ವಾರ್ಥಮಯಗೊಳಿಸುವುದು. ಜೀವನದ ಉದ್ದೇಶವೇಸಂಪತ್ತು ಗಳಿಸುವುದು ಹಾಗೂ ಸಮಾಜದಲ್ಲಿ ಧನಿಕನೆನಿಸಿಕೊಂಡು ಕೀರ್ತಿವಂತ ನಾಗುವುದು ಎಂಬ ಭಾವನೆತೀವ್ರಗೊಳ್ಳುವುದು. ಫಲಾಪೇಕ್ಷೆಯಲ್ಲೇ ಕರ್ಮನಿರತರಾದಾಗ ಅನಿತ್ಯವಾದ ಫಲಗಳು ಬೇಗನೆಸಿದ್ಧಿಸುವುದು ಸಹಜವೇ. ಏಕೆಂದರೆ ನಮ್ಮ ಶಕ್ತಿ-ಸಂಕಲ್ಪಗಳೆಲ್ಲವೂ ಫಲಸಿದ್ಧಿಗಾಗಿಯೇವಿನಿಯೋಗಗೊಳ್ಳುವವು. ಅದರಾಚೆಗಿನ ಯಾವುದೇ ಘನ ಉದ್ದೇಶ ಅಲ್ಲಿಲ್ಲದಿರುವುದರಿಂದ ಬದುಕುಸ್ವಾರ್ಥಮಯವಾಗುವುದು. ಈ ಒಟ್ಟು ಪ್ರಕ್ರಿಯೆ ಆತ್ಮನಿಂದ ನಮ್ಮನ್ನು ದೂರಕ್ಕೆ ಕೊಂಡೊಯ್ದು ಬಾಹ್ಯಜಗತ್ತಿನ ಕ್ಷಣಭಂಗುರತೆಗೆ ಗುರಿಮಾಡುವುವು. ಸ್ವಾರ್ಥಪರತೆಯಲ್ಲಿ ಕ್ರೋಡೀಕರಿಸಿದ ಸಂಪತ್ತು, ಅಧಿಕಾರ, ಅಂತಸ್ತು ಹಾಗೂ ಕೀರ್ತಿ ಅತ್ಯಂತ ಕ್ಷಣಿಕವಾದುದು ಎಂಬ ಸತ್ಯವು ಅರಿವಿಗೆ ಬರುವುದು ಬಹಳತಡವಾಗಿ. ಏಕೆಂದರೆ ಭ್ರಮೆಯು ಮನುಷ್ಯ ಮತ್ತು ಸತ್ಯದ ನಡುವೆ ಕಬ್ಬಿಣದ ಗೋಡೆಯನ್ನೇನಿರ್ಮಿಸುತ್ತದೆ. ಪರಿಣಾಮವಾಗಿ ದುಃಖ ಹಾಗೂ ನಿರಾಶೆಯೇ ಬದುಕಿನಲ್ಲಿ ಉಳಿಯುವುದು. ಐಹಿಕಸುಖಭೋಗಗಳಿಂದ ಸಿಗುವ ಆನಂದವು ಕೇವಲ ಸ್ವಪ್ನಸುಖಕ್ಕೆ ಸಮಾನ ಎಂಬ ಸತ್ಯ ಅನುಭವಕ್ಕೆ ಬಂದಾಗನಿಜವಾದ ಸುಖ, ಸಂತೋಷ, ಆನಂದ ಯಾವುದು ಎಂಬ ಪ್ರಶ್ನೆ ಮನಸ್ಸಿನಲ್ಲಿ ಮೂಡುವುದು. ಅಂತಹ ಪ್ರಶ್ನೆಮನದಾಳದಲ್ಲಿ ಮೂಡಿದಾಗಲೇ ಮನಸ್ಸು ದೇವರ ಕಡೆಗೆ ತಿರುಗುವುದು. ನಿಜವಾದ ಸುಖ-ಸಂತೋಷ-ಶಾಂತಿ ನಮ್ಮ ಆಂತರ್ಯದ ಒಳಗೇ ಇದೆ ಎಂಬ ಅರಿವು ಉಂಟಾಗುವುದು.ಜ್ಞಾನಜ್ಯೋತಿಯ ಬೆಳಕಿನಲ್ಲಿ ಮನಸ್ಸು ಮುದಗೊಳ್ಳುವುದು