Home » ಗುಣ ಸ್ವಭಾವ
 

ಗುಣ ಸ್ವಭಾವ

by Kundapur Xpress
Spread the love

ದೇವರ ಅದ್ಭುತ ಸೃಷ್ಟಿಯಾಗಿರುವ ಈ ಪ್ರಕೃತಿಯಲ್ಲಿ ಎಲ್ಲವೂ ಇದೆ. ಅದರಲ್ಲಿ ಒಳ್ಳೆಯದು, ಕೆಟ್ಟದು ಎನ್ನುವುದನ್ನು ನಾವು ಪ್ರತ್ಯೇಕವಾಗಿ ಕಾಣುವಂತಿಲ್ಲ, ಅವೆರಡೂ ಎಲ್ಲದರಲ್ಲಿ ಕೂಡಿಕೊಂಡೇ ಇವೆ. ನಾವು ಯಾವ ಗುಣಗಳಿಂದ ಪ್ರಭಾವಿತರಾಗುವೆವೋ ಆ ಗುಣಗಳೇ ನಮ್ಮಲ್ಲಿ ಪ್ರತಿಫಲನಗೊಳ್ಳುವವು. ಸತ್ತ್ವ, ರಜಸ್ಸು, ತಮಸ್ಸು ಎಂಬ ಮೂರು ಗುಣಗಳು ನಮ್ಮಲ್ಲೇ ಇವೆ. ಒಂದೊಂದು ಸಂದರ್ಭದಲ್ಲಿ ಒಂದೊಂದು ಗುಣಗಳು ನಮ್ಮಲ್ಲಿ ವಿಜೃಂಭಿಸಬಹುದು. ನಮ್ಮ ಮನಸ್ಸನ್ನು ಅಜ್ಞಾನವು ಆವರಿಸಿಕೊಂಡಾಗ ಬುದ್ಧಿಯು ತನ್ನ ತೀಕ್ಷ್ಯತೆಯನ್ನು ಕಳೆದುಕೊಂಡು ಸೋಮಾರಿತನವು ನಮ್ಮಲ್ಲಿ ವಿಜೃಂಭಿಸಬಹುದು. ಕ್ರಿಯಾಶೀಲತೆಯನ್ನು ಬೆಳೆಸಿಕೊಂಡಂತೆ ಮನಸ್ಸನ್ನು ಆವರಿಸಿದ ಅಜ್ಞಾನವು ನಿಧಾನವಾಗಿ ಸರಿದಾಗ ರಾಜಸಿಕ ಗುಣವು ಕಾಣಿಸಿಕೊಳ್ಳಬಹುದು. ಬಾಹ್ಯ ಜಗತ್ತಿನೊಂದಿಗೆ ನಾವು ಹೆಚ್ಚೆಚ್ಚು ಬೆಸೆದುಕೊಂಡಂತೆ ನಮ್ಮಲ್ಲಿ ಕಾಮನೆಗಳು ತೀವ್ರಗೊಂಡು ಇಂದ್ರಿಯಗಳನ್ನು ತೃಪ್ತಿಪಡಿಸುವುದರಲ್ಲೇ ನಿಮಗ್ನರಾಗುವೆವು. ಆದರೆ ಜಗತ್ತಿನ ವ್ಯವಹಾರಗಳ ಕ್ಷಣಭಂಗುರತೆಯ ಅರಿವು ಕ್ರಮೇಣ ಉಂಟಾಗುವಾಗ ಮನಸ್ಸು ತನ್ನ ವಿವೇಕವನ್ನು ಮರಳಿ ಪಡೆಯುವಲ್ಲಿ ಸಮಸ್ಥಿತಿಯನ್ನು ಗಳಿಸುವತ್ತ ಹೋರಾಡುವುದು. ಆಗಲೇ ಸಾತ್ವಿಕ ಗುಣಗಳು ನಮ್ಮಲ್ಲಿ ಕಾಣಬರುವವು. ಇಷ್ಟು ಅಂಶಗಳನ್ನು ನಾವು ಸೂಕ್ಷ್ಮವಾಗಿ ಅವಲೋಕಿಸಿದರೆ ನಮ್ಮ ಬದುಕಿನ ಯಾವತ್ತೂ ಚಟುವಟಿಕೆಗಳು ಬಾಹ್ಯ ಅಂಶಗಳಿಂದ ಹಾಗೂ ಅವುಗಳ ಗುಣಸ್ವಭಾವಗಳಿಂದ ಪ್ರೇರಿತವಾದವುಗಳು ಎಂಬ ವಿಷಯ ನಮ್ಮ ಗಮನಕ್ಕೆ ಬರುವುದು. ಹಾಗೆಯೇ ಈ ಜಗತ್ತಿನಲ್ಲಿ ನಾವು ಕೇವಲ ಪಾತ್ರಧಾರಿಗಳೇ ವಿನಾ ನಮ್ಮ ಯಾವತ್ತೂ ಕರ್ಮಗಳ ಸೂತ್ರಧಾರಿಗಳು ನಾವಲ್ಲ ಎಂಬ ಸತ್ಯವೂ ಈ ವಿಚಾರದಲ್ಲಿ ಅಡಕವಾಗಿದೆ. ಆದರೆ ಈ ಸೂಕ್ಷ್ಮವನ್ನು ಅರಿಯದೆ ನಾವು ನಮ್ಮ ಬುದ್ಧಿವಂತಿಕೆ ಹಾಗೂ ಸಾಮರ್ಥ್ಯದಿಂದ ಹಲವಾರು ಮಹತ್ಕಾರ್ಯಗಳನ್ನು ಸಾಧಿಸಿ ದೆವೆಂಬ ಅಹಂಕಾರವನ್ನು ಪ್ರದರ್ಶಿಸುವೆವು !

   

Related Articles

error: Content is protected !!