Home » ಅಜ್ಞಾನದ ಬಲಿಪಶು
 

ಅಜ್ಞಾನದ ಬಲಿಪಶು

by Kundapur Xpress
Spread the love

ಅಂತಃಕರಣವನ್ನು ವಶದಲ್ಲಿಟ್ಟುಕೊಳ್ಳುವಾತನಿಗೆ ಮಾತ್ರವೇ ತಾನು ಯಾವ ಕರ್ಮಗಳನ್ನೂ ಮಾಡುತ್ತಿಲ್ಲ ಎಂಬ ವಿಚಾರ ಸ್ಪಷ್ಟವಾಗಿ ತಿಳಿದಿರುತ್ತದೆ. ಸಂಪೂರ್ಣವಾಗಿ ತನ್ನನ್ನು ಪರಮಾತ್ಮನಿಗೆ ಅರ್ಪಿಸಿಕೊಂಡಾತನಿಗೆ ಕರ್ಮಫಲದಲ್ಲಿ ಯಾವ ಆಸಕ್ತಿಯೂ ಇಲ್ಲದಿರುವುದರಿಂದ ಆತನಿಗೆ ತಾನು ತನ್ನ ಕರ್ಮಗಳ ಕರ್ತೃವೆಂಬ ಅಹಂಭಾವ ಮೂಡಲು ಸಾಧ್ಯವಿಲ್ಲ. ಏಕೆಂದರೆ ಆತನು ಅನಿತ್ಯವಾದ ಬಾಹ್ಯ ಜಗತ್ತಿನ ಆಕರ್ಷಣೆಗಳಿಂದ ಮುಕ್ತನಾಗಿ ತನ್ನೊಳಗೆ ಮತ್ತು ಹೊರಗೆ ಎಲ್ಲೆಲ್ಲೂ ದೇವರ ಅಂಶವನ್ನೇ ಕಾಣುತ್ತಿರುತ್ತಾನೆ ಎಂಬ ವಿಷಯದಲ್ಲಿ ಗೀತೆಯಲ್ಲಿ ಶ್ರೀಕೃಷ್ಣ ಅರ್ಜುನನಿಗೆ ಸ್ಪಷ್ಟಪಡಿಸುವುದು ಹೀಗೆ: ಯಾರು ತನ್ನ ಅಂತಃಕರಣವನ್ನು ತನ್ನ ವಶದಲ್ಲಿರಿಸಿಕೊಳ್ಳುವನೋ ಆತನು ನಿಸ್ಸಂದೇಹವಾಗಿ ಏನನ್ನೂ ಮಾಡದೆ ಮತ್ತು ಏನನ್ನೂ ಮಾಡಿಸದೆ ಒಂಬತ್ತು ದ್ವಾರಗಳುಳ್ಳ ಶರೀರರೂಪೀ ಮನೆಯಲ್ಲಿ ಎಲ್ಲ ಕರ್ಮಗಳನ್ನೂ ಮನಸ್ಸಿನಿಂದಲೇ ತ್ಯಜಿಸಿ, ಅರ್ಥಾತ್ ಇಂದ್ರಿಯಗಳು ಅವುಗಳ ವಿಷಯಗಳಲ್ಲಿ ಪ್ರವಹಿಸುತ್ತಿವೆ ಎಂದು ತಿಳಿದುಕೊಂಡು ಆನಂದವಾಗಿ ಸಚ್ಚಿದಾನಂದ ಘನ ಪರಮಾತ್ಮನಲ್ಲಿ ಸ್ಥಿರಗೊಂಡಿರುತ್ತಾನೆ. ದೈನಂದಿನ ಬದುಕಿನಲ್ಲಿ ನಮ್ಮ ಮುಖ್ಯ ಸಮಸ್ಯೆ ಎಂದರೆ ಪ್ರಾಪಂಚಿಕ ವಿಷಯಗಳಿಗೆ ನಮ್ಮನ್ನು ಬಿಗಿಯಾಗಿ ಬಂಧಿಸಿಕೊಂಡು ಅದರ ಹಿಡಿತದಲ್ಲಿ ಸಿಲುಕಿ ಒದ್ದಾಡುವುದು. ನಿಜಕ್ಕಾದರೆ ನಮ್ಮ ಸಂಕಷ್ಟಗಳಿಗೆ ನಾವೇ ಹೊಣೆಗಾರರು ಹೊರತು ಬೇರೆ ಯಾರೂ ಅಲ್ಲ; ದೇವರಂತೂ ಅಲ್ಲವೇ ಅಲ್ಲ. ಆದರೆ ನಮ್ಮ ಅಜ್ಞಾನದಿಂದಾಗಿ ನಾವು ಪ್ರತಿಯೊಂದು ಐಹಿಕ ಸಂಕಷ್ಟಗಳಿಗೂ ದೇವರನ್ನೇ ಹೊಣೆ ಮಾಡುತ್ತೇವೆ. ಫಲಾಪೇಕ್ಷೆಯಲ್ಲಿ ಕರ್ಮನಿರತರಾಗುವಾಗ ಐಶ್ವರ್ಯ, ಅಧಿಕಾರ, ಅಂತಸ್ತು, ಕೀರ್ತಿ ಮಾತ್ರವೇ ನಮ್ಮ ಕಣ್ಣಮುಂದೆ ಕುಣಿದಾಡುವುದು. ಅದರ ಆಕರ್ಷಣೆಯಲ್ಲೇ ನಮ್ಮೊಳಗೆ ಲೋಭ, ಮೋಹ, ಮದ, ಮತ್ಸರಗಳು ತಾಂಡವವಾಡತೊಡಗುವುದು, ಆತ್ಮನನ್ನು ಆವರಿಸುವ ಈ ಅಜ್ಞಾನದಲ್ಲಿ ದೇವರ ಪ್ರೀತ್ಯರ್ಥವಾಗಿ, ಆತನ ಆಜ್ಞಾನುಸಾರವೇ ಕರ್ಮನಿರತರಾಗಬೇಕೆಂಬ ಭಾವನೆ ಮೂಡುವುದಾದರೂ ಹೇಗೆ?

   

Related Articles

error: Content is protected !!