Home » ಭಾವಾತಿರೇಕ
 

ಭಾವಾತಿರೇಕ

by Kundapur Xpress
Spread the love

ಬದುಕಿನಲ್ಲಿ ನಾವು ಬಯಸಿದ್ದು ಸಿಕ್ಕಿದಾಗ ಅತ್ಯಂತ ಸಂತೋಷ ಪಡುತ್ತೇವೆ. ಹಾಗೆಯೇ ಬಯಸಿದ್ದು ಸಿಗದೆ ಹೋದಾಗ ತುಂಬ ದುಃಖ ಪಡುತ್ತೇವೆ. ಪ್ರಪಂಚವೇ ಮುಳುಗಿ ಹೋಯಿತೆಂಬಷ್ಟು ರೋದಿಸುತ್ತೇವೆ. ಸೂಕ್ಷ್ಮವಾಗಿ ಗಮನಿಸಿದರೆ ನಮ್ಮ ಸಂತೋಷವಾಗಲೀ ದುಃಖವಾಗಲೀ ತುಂಬ ಕ್ಷಣಿಕವಾದದ್ದು. ಆದರೂ ನಾವು ಅದನ್ನು ಮರೆತು ಸಂತೋಷವನ್ನು ಅತ್ಯಂತ ಸಂಭ್ರಮದಿಂದ ಆನಂದಿಸುತ್ತೇವೆ. ಹಾಗೆಯೇ ದುಃಖವನ್ನು ಅತ್ಯಂತ ನೋವಿನಿಂದ ನರಳುತ್ತಾ ಅನುಭವಿಸುತ್ತೇವೆ. ಅನಂತರ ಕಾಲ ಸರಿದಂತೆ ಸಂತೋಷವನ್ನೂ ದುಃಖವನ್ನೂ ನಿಧಾನವಾಗಿ ಮರೆಯುತ್ತೇವೆ. ವಿಚಿತ್ರವೆಂದರೆ ನಮ್ಮ ಭಾವಾತಿರೇಕಗಳು ಮಕ್ಕಳ ಆಟದ ಹಾಗೆ, ತಮ್ಮ ಆಟದ ಗೊಂಬೆಗಳ ಕೈ-ಕಾಲು ಮುರಿದು ಹೋದಾಗ ಮಕ್ಕಳು ವಿಪರೀತವಾಗಿ ಅಳುವ ಪರಿಯನ್ನು ನಾವು ನೋಡುವುದಿಲ್ಲವೆ? ಆ ಗೊಂಬೆಗಳು ಕೇವಲ ಆಟದ ವಸ್ತುಗಳು ಎಂಬ ಅನ್ನಿಸಿಕೆ ಆ ಮಕ್ಕಳಲ್ಲಿ ಮೂಡಲಾರದು. ಅವು ತಮ್ಮಂತೆ ಜೀವಂತವಿರುವ ಮಕ್ಕಳು ಎಂಬ ಭಾವನೆಯೇ ಅವರಲ್ಲಿ ಇರುವುದು. ಬದುಕಿನಲ್ಲಿ ಭಾವಾವೇಶಕ್ಕೆ ಗುರಿಯಾಗುತ್ತಲೇ ಇರುವ ನಾವು ಕೂಡ ವಸ್ತುತಃ ಚಿಕ್ಕ ಮಕ್ಕಳ ಹಾಗೆ, ಯಾವ ಸುಖ-ಸಂತೋಷ, ದುಃಖ-ದುಮ್ಮಾನಗಳು ಕ್ಷಣಿಕವೋ ಅವು ಶಾಶ್ವತವೆಂಬತೆ ನಾವೂ ಭಾವಿಸುತ್ತೇವೆ. ಅವುಗಳ ಇತಿಮಿತಿಯನ್ನು, ಸತ್ಯಾಸತ್ಯತೆಯನ್ನು ಅರಿಯುವ ಕೂಡ ಹೋಗುವುದಿಲ್ಲ. ಆದುದರಿಂದಲೇ ನಾವು ಜೀವನದ ಉದ್ದಕ್ಕೂ ಮೋಹಪರವಶರಾಗಿ ಉಳಿಯುತ್ತೇವೆ. ಜೀವನವೆಂಬ ತಪಸ್ಸಿನ ಬಹಳ ಮುಖ್ಯ ಗುರಿಯೆಂದರೆ ಅದರ ಕ್ಷಣ ಭಂಗುರತೆಯನ್ನು ಅರಿಯುವುದು. ಕ್ಷಣಕ್ಷಣಕ್ಕೂ ಎಲ್ಲವೂ ಬದಲಾಗುತ್ತಲೇ ಇರುವುದು ಮಿಥ್ಯಾ ಜಗತ್ತಿನ ಲಕ್ಷಣವಾಗಿದೆ. ಪ್ರಕೃತಿಯ ಈ ನಿಯಮವನ್ನು ನಾವು ಅರಿಯದೆ ಹೋದರೆ ಭ್ರಮಾಧೀನರಾಗುವೆವು. ನಮ್ಮಲ್ಲಿನ ಅರಿಷಡ್ವರ್ಗಗಳೇ ನಮ್ಮನ್ನು ಆಳುವವು. ಪರಿಣಾಮವಾಗಿ ಮನಸ್ಸಿನ ಸಮತ್ವವನ್ನು ಕಳೆದುಕೊಂಡು ಸದಾ ಭಾವಾವೇಶದಿಂದ ಬದುಕುವೆವು. ಅಜ್ಞಾನದ ಅಂಧಕಾರದಲ್ಲಿ ಅಲೆಯುವೆವು. ಅತ್ಯದೇಗುಲದ ದ್ವಾರಗಳನ್ನು ನಾವೇ ಮುಚ್ಚಿಬಿಡುವೆವು

   

Related Articles

error: Content is protected !!