- ವಿಧೇಯ ವಿದ್ಯಾರ್ಥಿ!
ಪಂಚೇಂದ್ರಿಯಗಳ ಸೂಕ್ಷ್ಮಾತಿಸೂಕ್ಷ್ಮ ಅನುಭೂತಿಗೂ ಮೀರಿದ ಸುಖವೇ ನಿಜವಾದ ಸುಖ ಎನ್ನುವ ಮಾತನ್ನು ಅರ್ಥ ಮಾಡಿಕೊಳ್ಳುವುದು ಕಷ್ಟ. ನಮ್ಮೆಲ್ಲ ಅನುಭವಗಳನ್ನು ನಾವು ಗ್ರಹಿಸುವುದು ಪಂಚೇಂದ್ರಿಯಗಳ ಮೂಲಕವೇ. ಹಾಗಿರುವಾಗ ಈ ಇಂದ್ರಿಯಗಳ ಅನುಭೂತಿಗೆ ಮೀರಿದ ಸುಖವನ್ನು ನಾವು ಅನುಭವಿಸುವುದಾದರೂ ಹೇಗೆ ಎಂಬ ಜಿಜ್ಞಾಸೆ ಮೂಡುವುದು ಸಹಜವೇ ಆಗಿದೆ. ಮನಸ್ಸನ್ನು ಧ್ಯಾನಕ್ಕೆ ತೊಡಗಿಸುವುದರ ಹಿಂದಿನ ಮೂಲಭೂತ ಉದ್ದೇಶವೇ ಮನಸ್ಸನ್ನು ‘ಬರಿದು’ ಮಾಡುವುದಾಗಿದೆ. ಮನಸ್ಸನ್ನು ‘ಖಾಲಿ’ ಮಾಡುವ ಪ್ರಯತ್ನದ ಫಲವಾಗಿಯೇ ಮನದಾಳದೊಳಗೆ ಸದಾ ನಡೆಯುತ್ತಲೇ ಇರುವ ಪ್ರಾಪಂಚಿಕ ಸಂಗತಿಗಳ ಚರ್ವಿತ ಚರ್ವಣ ಪ್ರಕ್ರಿಯೆಯ ಗತಿ ನಿಧಾನವಾಗುತ್ತದೆ. ಇದೇನೂ ಸುಲಭದ ಕೆಲಸವೆಂದು ತಿಳಿಯುವಂತಿಲ್ಲ. ಸ್ವಲ್ಪ ಹೊತ್ತು ಕಣ್ಣುಮುಚ್ಚಿ ಧ್ಯಾನಕ್ಕೆ ಕುಳಿತುಕೊಂಡು ಉಸಿರನ್ನು ಗಣಿಸಲು ತೊಡಗಿದರೆ ಹದಿನೆಂಟು, ಹತ್ತೊಂಬತ್ತು, ಇಪ್ಪತ್ತು ಎಂದು ಎಣಿಸುತ್ತಲೇ ಮನಸ್ಸು ನಮ್ಮನ್ನು ನಡುಹಾದಿಯಲ್ಲಿ ಕೈಬಿಟ್ಟು ‘ವಿಹಾರ’ಕ್ಕೆ ಹೋಗಿರುತ್ತದೆ! ಅದು ವಿಹಾರಕ್ಕೆ ಹೋಗಿದೆ ಎಂದು ತಿಳಿಯುವಾಗ ಇತ್ತ ಗಣಿಸುವ ಪ್ರಕ್ರಿಯೆಯಲ್ಲಿ ಅಂಕೆ–ಸಂಖ್ಯೆ ಕೈಕೊಟ್ಟಿರುತ್ತದೆ. ‘ಈ ಮನಸ್ಸೆಂಬ ತುಂಟ ಪೋರ ಎಲ್ಲಿ ಹೋದನಪ್ಪಾ’ ಎಂದು ನೀವು ಹುಡುಕಲು ಹೊರಟರೆ ಆ ಪೋರನಿಗೆ ತನ್ನೊಡೆಯ ತನ್ನನ್ನು ಹುಡುಕಿಕೊಂಡು ಬಂದನೆಂಬ ಸಂಗತಿ ಕ್ಷಣಾರ್ಧದಲ್ಲಿ ಗೊತ್ತಾಗಿ ಬಿಡುತ್ತದೆ! ಹಾಗೆ ಗೊತ್ತಾದದ್ದೇ ತಡ, ಅದು ಮತ್ತೆ ತಿರುಗಿ ಬಂದು ಅತಿ ವಿಧೇಯ ವಿದ್ಯಾರ್ಥಿಯಂತೆ ಲೆಕ್ಕದ ಪಾಠಕ್ಕೆ ಕುಳಿತುಬಿಡುತ್ತದೆ!.