ಬದುಕಿನಲ್ಲಿ ನಾವು ಮಾಡುವ ಬಹಳ ದೊಡ್ಡ ತಪ್ಪೆಂದರೆ ಹುಣಸೇ ಹಣ್ಣಿನ ಬೀಜವನ್ನು ನೆಟ್ಟು ಅದರಿಂದ ಬೆಳೆಯುವ ಮರದಲ್ಲಿ ರುಚಿರುಚಿಯಾದ ಮಾವಿನ ಹಣ್ಣನ್ನು ನಿರೀಕ್ಷಿಸುವುದು! ಯಾವಾಗಲೂ ‘ಬಿತ್ತಿದಂತೆ ಬೆಳೆ’ ಎಂಬ ಮಾತನ್ನು ನಾವು ಮರೆಯಬಾರದು. ಬದುಕಿನಲ್ಲಿ ನಾವು ಹೇಗೆ ನಡೆಯುವವೋ ಅದರಂತೆ ನಮ್ಮ ಕರ್ಮಫಲವನ್ನು ಉಣ್ಣುವವು. ಒಳ್ಳೆಯ ಆರೋಗ್ಯಕ್ಕೆ ಒಳ್ಳೆಯ ಆಹಾರ ಅಗತ್ಯವಿರುವಂತೆ ಒಳ್ಳೆಯ ಮನಸ್ಸು ಕೂಡ ಇರುವುದು ಮುಖ್ಯ. ಇತರರಿಗೆ ಕೇಡು ಬಗೆಯುವವನಿಗೆ ಸ್ವಂತಕ್ಕೆ ಒಳ್ಳೆಯದಾಗುವುದಾದರೂ ಹೇಗೆ? ನಮ್ಮ ಮನಸ್ಸಿನ ಲಕ್ಷಣ ಹೇಗೆಂದರೆ ನಾವು ಯಾವುದನ್ನು ಅಪೇಕ್ಷಿಸುವವೋ ಅದು ದಕ್ಕಿದಂತೆ ಮತ್ತೆ ಮತ್ತೆ ಅದನ್ನೇ ತೀವ್ರವಾಗಿ, ದೊಡ್ಡ ಪ್ರಮಾಣದಲ್ಲಿ ಅಪೇಕ್ಷಿಸುವುದು, ಸಂಪತ್ತು, ಅಧಿಕಾರ, ಕೀರ್ತಿ ಮೊದಲಾದ ಅನಿತ್ಯ ಸಂಗತಿಗಳೆಲ್ಲ ಇದಕ್ಕೆ ಒಳ್ಳೆಯ ಉದಾಹರಣೆ. ಅವು ಅನಿತ್ಯವಾದುದರಿಂದಲೇ ನಾವು ಅವುಗಳನ್ನು ಎಷ್ಟೇ ಕಷ್ಟಪಟ್ಟರೂ ಶಾಶ್ವತವಾಗಿ ಉಳಿಸಿಕೊಳ್ಳಲಾರೆವು. ಯಾಕೆಂದರೆ ಅವು ಅನಿತ್ಯವೆಂಬ ಸತ್ಯಕ್ಕೆ ಸಂಪೂರ್ಣ ಕುರುಡರಾಗಿ ನಾವು ಅವನ್ನು ಪಡೆಯಲು ಮುಂದಾದದ್ದೇ ಕಾರಣ. ಕುರುಡನಾದವನು ತನ್ನ ಸೊತ್ತನ್ನು ಎಷ್ಟು ಜೋಪಾನ ಮಾಡಿಯಾನು? ಐಹಿಕ ಜಗತ್ತಿಗೆ ಅಂಟಿಕೊAಡು ಅನಿತ್ಯವಾದ ಭೌತಿಕ ಸಂಪತ್ತಿನಿಂದಲೇ ಸುಖ, ಶಾಂತಿ, ಸಮಾಧಾನ ದೊರಕುತ್ತವೆ ಎಂಬ ಭಾವನೆಯಲ್ಲಿ ಅದರ ಬೆನ್ನಿಗೆ ಬಿದ್ದಿರುವ ನಾವು ಕುರುಡನಿಗೆ ಸರಿ ಸಮಾನರಾಗಿದ್ದೇವೆ. ಹಾಗಾಗಿಯೇ ಬದುಕಿನಲ್ಲಿ ನಿರಂತರವಾದ ದುಃಖಕ್ಕೆ ಗುರಿಯಾಗಿದ್ದೇವೆ. ಎಷ್ಟೇ ಸಂಪತ್ತನ್ನು ಕಲೆಹಾಕಿದರೂ ಚಿಂತೆಯ ಚಿತೆಯಿಂದ ಮೇಲೇಳಲಾರೆವು. ಅನಿತ್ಯವಾದ ಬದುಕು, ಸಂಪತ್ತು ನಮಗೆ ಇಷ್ಟೊಂದು ಕಠೋರವಾದ ಪಾಠವನ್ನು ಕಲಿಸುತ್ತಿದ್ದರೂ ನಾವು ಅದರ ಸಂದೇಶವನ್ನು ಅರಿಯುವ ಗೊಡವೆಗೇ ಹೋಗುವುದಿಲ್ಲ. ಆ ಸಂದೇಶವೆಂದರೆ ಅನಿತ್ಯವಲ್ಲದ ಪರಮಾತ್ಮನನ್ನಲ್ಲದೆ ಬೇರೆ ಏನನ್ನೂ ಬಯಸಿ ಫಲವಿಲ್ಲ. ಪರಮಾತ್ಮನಲ್ಲಿ ಧ್ಯಾನಾಸಕ್ತರಾಗುವುದರಲ್ಲೇ ಸಂಪೂರ್ಣ ಶಾಂತಿ ಲಭಿಸುತ್ತದೆ.
—