ನಾವು ಈ ಪ್ರಪಂಚದಲ್ಲಿ ಹುಟ್ಟಿ ಬಂದಿರುವುದು ನಮ್ಮ ಅಪೇಕ್ಷೆಯಂತೆ ಅಲ್ಲ. ಮಹಾಮಹಿಮನಾದ ಆ ಭಗವಂತನ ಅಪೇಕ್ಷೆಯ ಮೇರೆಗೆ ಎನ್ನುತ್ತದೆ ಪವಿತ್ರ ಗ್ರಂಥಗಳು ಶರೀರ ನಾಶವಾಗಿ ಹೋಗುವ ಮೊದಲೇ ನಾವು ನಮ್ಮಿ ಜೀವಿತಾವಧಿಯಲ್ಲಿ ಕಾಮ-ಕ್ರೋಧಾದಿಗಳನ್ನು ಶಾಶ್ವತವಾಗಿ ಜಯಿಸಿ ನಿಜವಾದ ಅರ್ಥದಲ್ಲಿ ಯೋಗಿ ಎಂದೆನಿಸಿಕೊಳ್ಳಬೇಕೆಂಬುದೇ ದೇವರ ಅಪೇಕ್ಷೆಯಾಗಿದೆ. ಏಕೆಂದರೆ ನಾವೆಲ್ಲರೂ ಸುಖೀಪುರುಷರಾಗಿ ಐಹಿಕ ಬದುಕಿನಲ್ಲಿ ಬಾಳಲು ಬೇರೆ ಮಾರ್ಗವೇ ಇಲ್ಲ. ಆದುದರಿಂದ ಐಹಿಕ ಸುಖಭೋಗಗಳ ಮೂಲಕ ಸುಖ, ಶಾಂತಿ, ಸಮಾಧಾನವನ್ನು ಪಡೆಯುತ್ತೇವೆಂಬ ಭ್ರಮೆಯಲ್ಲಿ ಬದುಕುವ ನಾವು ನಿಜವಾಗಿಯೂ ಪಥಭ್ರಷ್ಟರೇ ಆಗಿದ್ದೇವೆ. ಈ ಸೃಷ್ಟಿಯ ಪ್ರತಿಯೊಂದು ವಸ್ತುವಿನಲ್ಲಿ, ಜೀವಜಾಲದಲ್ಲಿ ದೇವರೇ ತುಂಬಿಕೊಂಡಿದ್ದಾನೆ ಎಂದು ಯಾರು ಎಷ್ಟೇ ಹೇಳಿದರೂ ಗುಡಿಯಲ್ಲಲ್ಲದೆ ಬೇರೆಲ್ಲೂ ದೇವರನ್ನು ‘ಕಾಣಲು’ ನಮಗೆ ಅಸಾಧ್ಯವಾಗಿರುವುದಕ್ಕೆ ಕಾರಣವೇನು? ಕಾರಣ ನಮ್ಮಲ್ಲಿನ ಸಂಶಯಗಳು, ಭ್ರಮೆಗಳು ಮತ್ತು ಆ ಮೂಲಕ ಉತ್ಪನ್ನಗೊಂಡ ತರತಮ ಭಾವಗಳು. ಯಾರು ಪ್ರಶಾಂತವಾದ ಬ್ರಹ್ಮಾನಂದವನ್ನು ಪಡೆಯಲು ಸಾಧ್ಯ ಎನ್ನುವುದಕ್ಕೆ ಶ್ರೀಕೃಷ್ಣನು ಗೀತೆಯಲ್ಲಿ ಹೇಳುವುದು ಹೀಗೆ: ಪಾಪಗಳನ್ನೆಲ್ಲ ಕಳೆದುಕೊಂಡವರು, ಜ್ಞಾನದ ಮೂಲಕ ಭೇದಭಾವದ ಸಂಶಯಗಳನ್ನೆಲ್ಲ ನಿವಾರಿಸಿಕೊಂಡವರು, ಎಲ್ಲ ಪ್ರಾಣಿಗಳ ಹಿತದಲ್ಲಿ ನಿರತರಾದವರು ಮತ್ತು ಏಕಾಗ್ರತೆಯಿಂದ ಭಗವಂತನ ಧ್ಯಾನದಲ್ಲಿ ತಮ್ಮ ಮನಸ್ಸನ್ನು ನೆಟ್ಟವರು ಮಾತ್ರವೇ ಸಚ್ಚಿದಾನಂದವನ್ನು ಪಡೆಯುತ್ತಾರೆ. ಹಾಗೆಯೇ ಕಾಮಕ್ರೋಧಗಳಿಂದ ಬಿಡುಗಡೆ ಹೊಂದಿದವರಿಗೆ, ಮನಸ್ಸನ್ನು ವಶದಲ್ಲಿಟ್ಟುಕೊಂಡವರಿಗೆ ಮತ್ತು ಪರಬ್ರಹ್ಮ ಸ್ವರೂಪಿ ಪರಮಾತ್ಮನ ಸಾಕ್ಷಾತ್ಕಾರ ಮಾಡಿಕೊಂಡ ಜ್ಞಾನಿಗಳಿಗೆ ಎಲ್ಲೆಲ್ಲೂ ಪರಮಾತ್ಮನೇ ಕಾಣಿಸುತ್ತಾನೆ