Home » ಈಶ್ವರನಲ್ಲಿ ವಿಶ್ವಾಸ
 

ಈಶ್ವರನಲ್ಲಿ ವಿಶ್ವಾಸ

by Kundapur Xpress
Spread the love

ಮನಸ್ಸನ್ನು ವಶದಲ್ಲಿಟ್ಟುಕೊಳ್ಳಲು ನಮಗೆ ಅತೀ ಮುಖ್ಯವಾಗಿ ಬೇಕಾದದ್ದು ವಿಶ್ವಾಸ. ನಮ್ಮ ಮೇಲೆ ನಮಗಿರಬೇಕಾದ ವಿಶ್ವಾಸ. ಅದನ್ನು ನಾವು ಆತ್ಮವಿಶ್ವಾಸವೆಂದೇ ಹೇಳಬೇಕು. ಮಹಾನ್ ಸೇನಾನಿ ನೆಪೋಲಿಯನ್ ಒಂದೆಡೆ ಹೇಳುತ್ತಾನೆ: ಯುದ್ಧದಲ್ಲಿ ಗೆಲ್ಲುವೆನೆಂಬ ಆತ್ಮವಿಶ್ವಾಸ ಹೊಂದಿಲ್ಲದವನು ಯುದ್ಧಕ್ಕೆ ಮುನ್ನವೇ ಸೋತಿರುತ್ತಾನೆ! ಅಧೈರ್ಯ ಎನ್ನುವುದು ಯೋಧನಿಗೆ ಶೋಭೆ ತರುವುದಿಲ್ಲ. ರಣರಂಗದಲ್ಲಿ ಕಾದಾಡುವ ಯೋಧನಿಗೂ ಬಹುಮುಖ ಸವಾಲುಗಳನ್ನು ಎದುರಿಸುತ್ತಿರುವ ನಮ್ಮ ಬದುಕೆಂಬ ರಣರಂಗಕ್ಕೂ ವ್ಯತ್ಯಾಸವೇನೂ ಇಲ್ಲ. ನಮ್ಮ ಶಕ್ತಿ-ಸಾಮರ್ಥ್ಯದಲ್ಲಿ ನಮಗೆ ವಿಶ್ವಾಸವಿರಬೇಕಾದರೆ ನಮ್ಮ ಮನಸ್ಸನ್ನು ನಾವು ಚೆನ್ನಾಗಿ ಅರಿತು ಅದನ್ನು ನಮ್ಮ ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು. ಮನಸ್ಸನ್ನು ಎಂದೂ ಉದ್ವಿಗ್ನಗೊಳ್ಳಲು ಬಿಡಬಾರದು. ಅದು ತನಗೆ ತೋಚಿದಾಗಲೆಲ್ಲ ಸಿಟ್ಟು, ಸೆಡವು, ಉದ್ವಿಗ್ನತೆಯನ್ನು ತಂದುಕೊಂಡಿತೆಂದರೆ ನಮ್ಮಲ್ಲಿನ ಮುಕ್ಕಾಲು ಅಂಶ ಶಕ್ತಿ ಅಪವ್ಯಯವಾದ ಹಾಗೆಯೇ ಸರಿ. ಮನಸ್ಸನ್ನು ಸುಸ್ಥಿತಿಯಲ್ಲಿ ಇಟ್ಟುಕೊಂಡರೆ ದೇಹವನು * ಬುದ್ದಿಪೂರ್ವಕವಾಗಿ ದುಡಿಸಿಕೊಳ್ಳಬಹುದು. ಬುದ್ದಿಗೆ ಒಳಿತು ಕೆಡುಕುಗಳನ್ನು ತರ್ಕಿಸುವ ಪರಿಣಾಮಗಳನ್ನು ಮುನಗಾಣುವ ಶಕ್ತಿ ಇದೆ. ವಿವೇಚನಾ ಸಾಮರ್ಥ್ಯವಿದೆ. ದೂರದೃಷ್ಟಿ ಇದೆ. ಆದರೆ ಮನಸ್ಸು ಹಾಗಲ್ಲ. ಅದು ತೀರ ಭಾವನಾತ್ಮಕ. ಒಮ್ಮೆಲೇ ದುಡುಕುವ ಸ್ವಭಾವ ಅದರದ್ದು. ಹಾಗೆಯೇ ಮುದುಡಿಕೊಳ್ಳುವ ಸಂಕೋಚ ಪ್ರವೃತ್ತಿ ಅದರದ್ದು. ನಮ್ಮಲ್ಲಿ ಆತ್ಮವಿಶ್ವಾಸವನ್ನು ನಾವು ಚೆನ್ನಾಗಿ ಬೆಳೆಸಿಕೊಂಡರೆ ಬುದ್ಧಿ, ಮನಸ್ಸು ಹಾಗೂ ದೇಹವನ್ನು ವಿವೇಕಪೂರ್ಣವಾಗಿ ದುಡಿಸಿಕೊಂಡು ಎಲ್ಲರಲ್ಲೂ ಎಲ್ಲದರಲ್ಲೂ ದೇವರನ್ನು ಕಾಣಬಹುದು. ಸ್ವಾಮಿ ವಿವೇಕಾನಂದರು ಹೇಳುತ್ತಾರೆ: ಬದುಕಿನಲ್ಲಿ ನಮ್ಮ ಪ್ರಥಮ ಕರ್ತವ್ಯ ಆತ್ಮನಿಂದೆಯ ತ್ಯಾಗ. ಏಕೆಂದರೆ ನಮ್ಮ ಏಳಿಗೆಗೆ ಮೊತ್ತಮೊದಲು ನಮಗೆ ಬೇಕಾದದ್ದು ಆತ್ಮವಿಶ್ವಾಸ. ಅದಿಲ್ಲದಿದ್ದರೆ ನಮಗೆ ಈಶ್ವರನಲ್ಲಿ ವಿಶ್ವಾಸಬಾರದು!

   

Related Articles

error: Content is protected !!