ನಮ್ಮೊಳಗೆ ತುಂಬಿಕೊAಡಿರುವ ಆತ್ಮನಿಂದೆಯ ಪ್ರವೃತ್ತಿಯನ್ನು ನಾವು ಮೊತ್ತ ಮೊದಲಾಗಿ ನಾಶಮಾಡಬೇಕು. ನಮ್ಮನ್ನು ನಾವು ಕೀಳಾಗಿ ಕಾಣುವುದು, ನಮ್ಮ ಶಕ್ತಿಸಾಮರ್ಥ್ಯವನ್ನು ನಾವು ಕಡೆಗಣಿಸುವುದು, ಬಲಿಷ್ಠರೊಡನೆ ಹೋಲಿಸಿ ನಾವು ದುರ್ಬಲರೆಂದು ತೀರ್ಮಾನಿಸುವುದು, ಬದುಕಿನಲ್ಲಿ ನಮ್ಮಷ್ಟು ನತದೃಷ್ಟರು ಬೇರೆ ಯಾರೂ ಇಲ್ಲವೆಂದು ಬಗೆಯುವುದು – ಇವೆಲ್ಲ ಆತ್ಮನಿಂದೆಯ ಪ್ರವೃತ್ತಿಯಿಂದಾಗುವ ಪೀಡೆಗಳು. ನಮ್ಮ ಮನಸ್ಸಿನ ಮೇಲೆ ನಾವು ಹತೋಟಿ ಹೊಂದದಿರುವ ದುಷ್ಪರಿಣಾಮಗಳು. ಬದುಕೊಂದು ದಿವ್ಯ ಸವಾಲು; ನಾವದನ್ನು ಋಜುಮಾರ್ಗದಿಂದ ಗೆಲ್ಲಬೇಕು. ಬದುಕಿನ ದಿಗ್ವಿಜಯಕ್ಕೆ ತೊಡಗಿರುವ ನಾವು ಎಂದೂ ಆತ್ಮನಿಂದೆಯ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬಾರದು. ಬುದ್ಧಿಯ ಮೂಲಕ ಮನಸ್ಸನ್ನು ನಿಯಂತ್ರಿಸಬೇಕು; ಮನಸ್ಸಿನ ಮೂಲಕ ದೇಹವನ್ನು ರಚನಾತ್ಮಕವಾಗಿ ದುಡಿಸಿಕೊಳ್ಳಬೇಕು. ಈ ಮೂರರ ಮೇಲೆ ಲಗಾಮನ್ನು ಹೊಂದಿರಬೇಕಾದರೆ ಆತ್ಮಶಕ್ತಿಯನ್ನು ಜಾಗೃತಗೊಳಿಸಬೇಕು. ಆತ್ಮಶಕ್ತಿ ಎಂದರೆ ಏನು? ಮಹಾತ್ಮಾ ಗಾಂಧೀಜಿಯವರು ಅದನ್ನು ಬಹಳ ಸರಳವಾಗಿ, ಆದರೆ ಗಂಭೀರತೆಗೆ ಚ್ಯುತಿ ಬಾರದಂತೆ ಒಂದೇ ವಾಕ್ಯದಲ್ಲಿ ವ್ಯಾಖ್ಯಾನಿಸಿದ್ದಾರೆ; ಆತ್ಮಶಕ್ತಿ ಎಂದರೆ ಬುದ್ಧಿ ಮನಸ್ಸು ಹಾಗೂ ದೇಹಕ್ಕೆ ಚೇತನ ನೀಡುವ ಸೂಕ್ಷ್ಮವಾದ ಒಂದು ದಿವ್ಯ ಶಕ್ತಿ ಆ ದಿವ್ಯವಾದ ಶಕ್ತಿಯು ಎಲ್ಲರೊಳಗೂ ಇದೆ. ಆದರೆ ಆತ್ಮನಿಂದೆ ಎಂಬ ಅಜ್ಞಾನದಿಂದ ಆ ಶಕ್ತಿಯ ಮೇಲೆ ಮುಸುಕು ಬಿದ್ದಿದೆ. ಆ ಮುಸುಕನ್ನು ತೆಗೆಯದೆ ಬದುಕಿನ ದಿಗ್ವಿಜಯಕ್ಕೆ ನಾವು ಯಶಸ್ವಿಯಾಗಿ ತೊಡಗಲಾರೆವು. ಆತ್ಮಶಕ್ತಿಯನ್ನು ಜಾಗೃತಗೊಳಿಸಲು ನಾವು ಆತ್ಮವಿಶ್ವಾಸವನ್ನು ತಳೆಯುವುದು ಮುಖ್ಯ. ವರಕವಿ ದ.ರಾ. ಬೇಂದ್ರೆಯವರು ಒಂದೆಡೆ ಹೇಳುತ್ತಾರೆ: ನಿನ್ನೊಳಗೆ `ನೀ ಹೊಕ್ಕು, ನಿನ್ನ ನೀನೇ ಕಂಡು ನೀನೇ-ನೀನಾಗು ಗೆಳೆಯ. ನಮ್ಮ ಶಕ್ತಿ, ಸಾಮರ್ಥ್ಯದ ಜತೆ ನಮ್ಮನ್ನೇ ನಾವು ಸಂಪೂರ್ಣವಾಗಿ ಅರಿಯಲು ನಮ್ಮೊಳಗೇ ನಾವು ಪ್ರವೇಶ ಪಡೆಯುವುದು ಅಗತ್ಯ!