ಆನಂದಮಯ ಬದುಕನ್ನು ನಡೆಸಲು ನಮಗೆ ಅಗತ್ಯವಾಗಿ ಬೇಕಾದದ್ದು ಏನು ಎಂಬ ಪ್ರಶ್ನೆಯನ್ನು ಕೇಳಿದರೆ ಅನೇಕರು ಐಶ್ವರ್ಯ, ಸಂಪತ್ತು, ಕಾರು, ಬಂಗಲೆ, ಆಳು-ಕಾಳು, ಅಧಿಕಾರ, ಅಂತಸ್ತು ಇತ್ಯಾದಿ ಇತ್ಯಾದಿ ಎಂದು ಧಾರಾಳವಾಗಿ ಉತ್ತರಿಸುತ್ತಾರೆ. ಪ್ರಾಪಂಚಿಕ ಬದುಕಿಗೆ ಅಂಟಿಕೊಂಡ ನಮಗೆ ಭೌತಿಕ ಸಿರಿ-ಸಂಪತ್ತುಗಳೇ ಆನಂದಮಯ ಬದುಕಿಗೆ ಅತ್ಯಗತ್ಯವೆಂಬ ಭಾವನೆ ಮೂಡುವುದು ಸಹಜ. ನಮ್ಮಲ್ಲೊಂದು ದೌರ್ಬಲ್ಯವಿದೆ. ನಮ್ಮ ಬಳಿ ಯಾವುದು ಇಲ್ಲವೋ ಅದು ಇದ್ದಿದ್ದರೆ ಎಲ್ಲರಿಗಿಂತಲೂ ನಾವು ಸುಖವಾಗಿರಬಹುದಿತ್ತು ಎಂದು ಭ್ರಮಿಸುವ ದೌರ್ಬಲ್ಯ ಅದು. ವಿಚಿತ್ರವೆಂದರೆ ನಮ್ಮ ಬಳಿ ಇಲ್ಲದನ್ನು ಪಡೆದ ಬಳಿಕವೂ ನಾವು ಇತರರಿಗಿಂತ ಸುಖಿಗಳಾದೆವು ಎಂಬ ಭಾವನೆಯೇ ನಮ್ಮಲ್ಲಿ ಬರುವುದಿಲ್ಲ. ಲೋಕೋಕ್ತಿಯೊಂದರ ಪ್ರಕಾರ ಯಾವಾಗಲೂ ಸುಖವಾಗಿ ಬಾಳಬೇಕೆಂದು ಬಯಸುವವರು ಕಷ್ಟದೊಂದಿಗೆ ಬಾಳುತ್ತಾರೆ ! ಎಂದರೆ ನಮ್ಮ ಯಾವತ್ತೂ ಭೌತಿಕ ಕೊರತೆಗಳು ಪೂರೈಸಲ್ಪರೂ ನಾವು ಅಸುಖಿಗಳಾಗಿಯೇ ಇರುವೆವು ಎಷ್ಟನ್ನು ಪಡೆದರೂ ಸದಾ ಅತೃಪ್ತಿಯಲ್ಲೇ ಬದುಕುವವು ಎಂದರ್ಥ, ಈ ಸೂಕ್ಷ್ಮವನ್ನು ಅರಿತರೆ ನಮ್ಮ ಸಮಸ್ಯೆಯನ್ನು ಸ್ವಲ್ಪ ಮಟ್ಟಿಗೆ ನಿವಾರಿಸಲು ನಮಗೆ ಸಾಧ್ಯವಾದೀತು ಮಾನಸಿಕವಾಗಿ ನಮ್ಮಲ್ಲಿರುವ ಪ್ರಜ್ಞಾಲೋಪವನ್ನು ಒಂದು ಸಾಸಿವೆ ಕಾಳಿನಷ್ಟಾದರೂ ನಿವಾರಿಸಬಲ್ಲ ಗುಣವಾಗಲೀ ಸಾಮರ್ಥ್ಯವಾಗಲೀ ಯಾವುದೇ ಭೌತಿಕ ವಸ್ತುವಿನಲ್ಲಿ ಇಲ್ಲ ಎನ್ನುವುದನ್ನು ಮೊದಲು ಮನಗಾಣಬೇಕು. ಏಕೆಂದರೆ ಅವು ನಮ್ಮಲ್ಲಿನ ಪ್ರಜ್ಞಾಲೋಪವನ್ನು ಮತ್ತಷ್ಟು ಹೆಚ್ಚಿಸುವ ಸಾಮರ್ಥ್ಯವನ್ನು ಮಾತ್ರವೇ ಹೊಂದಿವೆ. ಅನಿತ್ಯವಾದ ವಸ್ತುಗಳ ಹಂಬಲವು ದುರ್ಬಲ ಮನಸ್ಸನ್ನು ಮತ್ತಷ್ಟು ದುರ್ಬಲಗೊಳಿಸುತ್ತವೆ. ಆಸೆಬುರುಕತನವನ್ನು ಹೆಚ್ಚಿಸುತ್ತದೆ. ಸಚ್ಚಿದಾನಂದವನ್ನು ಉಂಟುಮಾಡಬಲ್ಲ ಆತ್ಮಶಕ್ತಿಯ ಮೂಲಕ ದೇವರೆಡೆಗೆ ನಮ್ಮನ್ನು ತಿರುಗಿಸಿ ಕೇಂದ್ರೀಕರಿಸುವವರೆಗೂ ನಾವು ನಮ್ಮಲ್ಲಿನ ಪ್ರಜ್ಞಾಕೊರತೆಯನ್ನು ನಿವಾರಿಸಲಾರೆವು