ನಮ್ಮಲ್ಲಿರುವ ಪ್ರಾಪಂಚಿಕ ವ್ಯಾಮೋಹ ಎಷ್ಟೆಂಬುದನ್ನು ಶಬ್ದಗಳಲ್ಲಿ ವರ್ಣಿಸ ಲಾಗದು. ಅಷ್ಟೊಂದು ಆಸೆಗಳನ್ನು ನಾವು ಮೈಗೂಡಿಸಿಕೊಂಡಿದ್ದೇವೆ. ಮಹಾ ಭಾರತದಲ್ಲಿ ಒಂದು ಮಾತು ಬರುತ್ತದೆ: ವಯಸ್ಸಾದಂತೆ ಕೂದಲು ಬೆಳ್ಳಗಾಗುತ್ತದೆ. ಹಲ್ಲುಗಳು ಉದುರುತ್ತವೆ. ಕಣ್ಣು ಕಿವಿಗಳ ಶಕ್ತಿ ನಶಿಸುತ್ತದೆ. ಆದರೆ ಆಸೆ ಮಾತ್ರ ಕ್ಷೀಣಿಸುವುದಿಲ್ಲ! ಐಶ್ವರ್ಯ, ಅಧಿಕಾರ, ಅಂತಸ್ತು, ಕೀರ್ತಿ, ಸಂಪತ್ತು, ಹೆಂಡತಿ, ಮಕ್ಕಳು ಎಂದು ಎಲ್ಲವನ್ನೂ ಬಹುವಾಗಿ ಪ್ರೀತಿಸುತ್ತೇವೆ. ಎಲ್ಲವೂ ಶಾಶ್ವತವೆಂದು ಭ್ರಮಿಸುತ್ತೇವೆ. ವಿಧಿ ಬಾಳಿನಲ್ಲಿ ನಮಗೆ ಎಷ್ಟು ಬಲವಾದ ಪೆಟ್ಟುಕೊಟ್ಟರೂ ಬದುಕಿನ ಕ್ಷಣಭಂಗುರತೆಯನ್ನು ಒಪ್ಪಿಕೊಳ್ಳಲು ನಾವು ತಯಾರಿರುವುದಿಲ್ಲ! ನಮ್ಮ ದೇಹಾಭಿಮಾನ ಕೂಡ ಅಷ್ಟೇ ತೀವ್ರವಾದದ್ದು. ಆದರೆ ಸತ್ಯವೆಂದರೆ ನಮ್ಮ ದೇಹವನ್ನಾಗಲೀ ನಮ್ಮ ಮನಸ್ಸನ್ನಾಗಲೀ ನಮ್ಮದೆಂದು ನಾವು ಹೇಳುವಂತಿಲ್ಲ. ನಮ್ಮ ದೇಹವು ಹೊರಗಿನ ಆಹಾರಗಳಿಂದ ಪೋಷಿಸಲ್ಪಟ್ಟಿದೆ. ನಮ್ಮ ಮನಸ್ಸು ಪೂರ್ತಿಯಾಗಿ ನಮ್ಮ ಹೆತ್ತವರು, ಶಿಕ್ಷಕರು, ಧಾರ್ಮಿಕ ಗುರುಗಳು ಹಾಗೂ ಪವಿತ್ರ ಗ್ರಂಥಗಳು ಮತ್ತು ಪುಸ್ತಕಗಳಿಂದ ರೂಪುಗೊಂಡದ್ದಾಗಿದೆ. ಹಾಗಿರುವಾಗ ಈ ಪ್ರಪಂಚದಲ್ಲಿ ನಾವು ನಮ್ಮದೆಂದು ಹೇಳು ವಂತಹದ್ದು ಯಾವುದಿದೆ? ಯಾವೂದೂ ಇಲ್ಲ. ನಮ್ಮೊಳಗಿರುವ ದಿವ್ಯವಾದ ಚೇತನ ಕೂಡ ನಮ್ಮದಲ್ಲ. ಅದು ದೇವರದ್ದು. ವಸ್ತುಸ್ಥಿತಿ ಹೀಗಿರುವಾಗ ನಾವು ಯಾವುದರ ಬಗೆಗಾದರೂ ಲೋಭ, ಮೋಹ, ಮದ, ಮತ್ಸರಪಡುವಂತಿದೆಯೇ? ನಮ್ಮಲ್ಲಿರುವ ದಿವ್ಯವಾದ ಚೈತನ್ಯದಿಂದ ನಾವು ನಮ್ಮ ಹಾಗೂ ಎಲ್ಲರ ಬಾಳನ್ನು ಬೆಳಗುವ ಕೆಲಸವನ್ನು ಮಾಡಬೇಕು. ಆ ಮೂಲಕ ನಾವು ದೇಹ, ಮನಸ್ಸು ಹಾಗೂ ಬುದ್ಧಿಯನ್ನು ಮೀರಿ ಉನ್ನತ ಸ್ಥಾನದಲ್ಲಿರುವ ಆತ್ಮನ ಬಗ್ಗೆ ಅರಿವನ್ನು ಮೂಡಿಸಿಕೊಳ್ಳಬೇಕು. ದೇವರು ತನ್ನ ಸೃಷ್ಟಿಯಲ್ಲಿ ಮನುಷ್ಯನನ್ನು ತನ್ನ ಪ್ರತಿನಿಧಿಯ ರೂಪದಲ್ಲಿ ಅತ್ಯಂತ ಎತ್ತರದ ಸ್ಥಾನದಲ್ಲಿ ಇರಿಸಿದ್ದಾನೆ. ಆದುದರಿಂದಲೇ ಮನುಷ್ಯ ಜನ್ಮ ಸರ್ವ ಶ್ರೇಷ್ಠವಾದದ್ದು. ಆದರೆ ಗೌತಮ ಬುದ್ದನ್ನು ಹೇಳುವಂತೆ ಒಂದು ಹೃದಯವನ್ನು ಅರ್ಥ ಮಾಡಿಕೊಳ್ಳಲು ಇನ್ನೊಂದು ಹೃದಯದಿಂದ ಮಾತ್ರ ಸಾಧ್ಯ. ಆ ಹೃದಯವಂತಿಕೆಯನ್ನು ನಾವು ನಮ್ಮಲ್ಲಿ ಬೆಳೆಸಿಕೊಳ್ಳಬೇಕಾದರೆ ನಮ್ಮೊಳಗೆ ನಾವು ದೇವರನ್ನು ಕಾಣಲು ಪ್ರಯತ್ನಿಸಬೇಕು.