Home » ದೇವರೇ ಗುರಿ
 

ದೇವರೇ ಗುರಿ

by Kundapur Xpress
Spread the love

ಹೃದಯವಂತಿಕೆಯನ್ನು ಬೆಳೆಸಿಕೊಳ್ಳುವುದೇ ನಮ್ಮ ಜೀವನದ ಮುಖ್ಯ ಗುರಿಯಾಗಿರಬೇಕು. ಯಾರು ಹೃದಯವಂತರಾಗಿರುತ್ತಾರೋ ಅವರು ಸಹೃದಯಿಗಳಾಗಿರುತ್ತಾರೆ. ಕಷ್ಟ-ದುಃಖಗಳನ್ನು ಅರಿಯುವವರಾಗುತ್ತಾರೆ. ಖ್ಯಾತ ತತ್ತ್ವಜ್ಞಾನಿ ಲಿಯೋ ಹೇಳುತ್ತಾರೆ: ಪ್ರಪಂಚದಲ್ಲಿ ಅತಿಯಾದ ಸುಖವನ್ನು ನೀಡುವುದೆಂದರೆ ಇತರರಿಗಾಗಿ ಬದುಕುವುದು! ಇತರರಿಗಾಗಿ ಬದುಕಬೇಕಾದರೆ ಇತರರ ನೋವಿಗೆ ಸ್ಪಂದಿಸುವ ಹೃದಯವಂತಿಕೆ ಇರುವುದು ಅಗತ್ಯ. ನಿಷ್ಕಲ್ಮಷವಾದ ಪ್ರೀತಿ, ಪ್ರೇಮ, ಮಮತೆ ಹುಟ್ಟಬೇಕಾದರೆ ಪ್ರತಿಯಾಗಿ ಏನನ್ನೂ ಬಯಸದ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಇದನ್ನು ನಾವು ಹೇಗೆ ಬೆಳೆಸಿಕೊಳ್ಳಬಹುದು? ಪ್ರಾಪಂಚಿಕ ವ್ಯಾಮೋಹವನ್ನು ಬೆಳೆಸಿಕೊಂಡಿರುವ ನಮಗೆ ಬದುಕೆಂದರೆ ಆವಶ್ಯಕತೆ ಆಧಾರಿತ ಸಂಬಂಧಗಳನ್ನು ಅವಲಂಬಿಸಿರುವುದೇ ಆಗಿದೆ. ಎಂದರೆ ನಮ್ಮ ಅಗತ್ಯಗಳಿಗೆ ಇತರರು ಸ್ಪಂದಿಸಬೇಕು ಎಂಬ ಸ್ವಾರ್ಥಪರ ಮನೋಭಾವವೇ ನಮ್ಮಲ್ಲಿ ಅಂತರ್ಗತವಾಗಿದೆ. ಪ್ರಾಪಂಚಿಕ ಸುಖಗಳಿಗೆ ಹಾತೊರೆ ಯುವ ಸ್ವಾರ್ಥಪರ ಮನೋಭಾವದಿಂದ ಹೊರಬರದೆ ನಮಗೆ ದೇವರಲ್ಲಿ ಭಕ್ತಿ ಮೂಡದು. ಅದಕ್ಕಾಗಿ ದಿನನಿತ್ಯದ ಪ್ರಾರ್ಥನೆಯಲ್ಲಿ ಕೂಡ ದೇವರನ್ನಲ್ಲದೆ ಬೇರೇನೂ ಬೇಡಿಕೊಳ್ಳದಿರುವ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು. ಪ್ರಾಪಂಚಿಕ ವಸ್ತುಗಳೆಲ್ಲವೂ ಅನಿತ್ಯವಾದವುಗಳೆಂಬ ಸತ್ಯವನ್ನು ಸದಾ ನೆನಪಿನಲ್ಲಿಡಬೇಕು. ಯಾವುದೇ ಫಲಾಪೇಕ್ಷೆಯಿಲ್ಲದೆ ದೇವರನ್ನು ಭಜಿಸಲು ಸಾಧ್ಯವಾದಾಗ ಮಾತ್ರ ನಿಷ್ಕಾಮಕರ್ಮದಲ್ಲಿ ತೊಡಗಲು ಸಾಧ್ಯವಾಗುತ್ತದೆ. ಪರಿಣಾಮವಾಗಿ ಇಂದ್ರಿಯಗಳು ನಮ್ಮ ಅಂಕಿತದಲ್ಲಿರುತ್ತವೆ. ಮನಸ್ಸಿನ ಸಮತ್ವವನ್ನು ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆ. ಸ್ವಾಮಿ ವಿವೇಕಾನಂದರು ಹೇಳುವಂತೆ ‘ದೇವರೇ ನಮ್ಮ ಜೀವನದ ಗುರಿಯಾಗಬೇಕು. ಈ ಜಗತ್ತು ಮತ್ತು ದೇಹ ಆ ಉನ್ನತ ಗುರಿಯನ್ನು ಸೇರಲು ನಮಗಿರುವ ಸಾಧನಗಳು ಎಂಬುದನ್ನು ನಾವು ಮರೆಯಕೂಡದು. ದೇವರನ್ನೇ ಗುರಿಯಾಗಿಸಿಕೊಂಡು ಪ್ರಪಂಚವನ್ನು ಮಾರ್ಗ ಮಾಡಿಕೊಂಡು ನಮ್ಮ ಬಾಳನ್ನು ಹಸನು ಗೊಳಿಸಬೇಕು; ಸಾರ್ಥಕತೆಯನ್ನು ಪಡೆಯಬೇಕು.

   

Related Articles

error: Content is protected !!