ನಮ್ಮ ಮನಸ್ಸು ಹೇಗೆ ಯೋಚಿಸುವುದೋ ಹಾಗೆ ನಾವಿರುವೆವು. ಆದುದರಿಂದ ಮನಸ್ಸನ್ನು ನಾವು ಯಾವಾಗಲೂ ನಿಷ್ಕಲ್ಮಶವಾಗಿ, ಪ್ರಫುಲ್ಲವಾಗಿ ಹಾಗೂ ಆನಂದಮಯವಾಗಿ ಇಟ್ಟುಕೊಳ್ಳಬೇಕು. ಮನಸ್ಸು ಚೆನ್ನಾಗಿದ್ದರೆ ಅದು ನಮ್ಮ ಪ್ರತಿಯೊಂದು ಕ್ರಿಯೆಯಲ್ಲೂ ವ್ಯಕ್ತವಾಗುತ್ತದೆ. ನಾವು ಮಾಡುವ ಪ್ರತಿಯೊಂದು ಕೆಲಸದಿಂದ ನಮಗೂ ಎಲ್ಲರಿಗೂ ಹಿತವಾಗುತ್ತದೆ. ಸಂತೋಷ ಲಭಿಸುತ್ತದೆ. ನಿಜಕ್ಕಾದರೆ ಮನಸ್ಸಿನ ಮೂಲ ಸ್ವಭಾವವೇ ಶಾಂತವಾಗಿರುವುದು ಮತ್ತು ಪ್ರಫುಲ್ಲವಾಗಿರುವುದು. ಆದರೆ ನಾವು ಮನಸ್ಸಿನ ಈ ಮೂಲ ಸ್ವಭಾವಕ್ಕೆ ವಿರುದ್ಧವಾಗಿ ಬದುಕುತ್ತೇವೆ. ಕೋಪ, ತಾಪಗಳನ್ನು ದಿನನಿತ್ಯವೂ ಆಹ್ವಾನಿಸುತ್ತಲೇ ಇರುತ್ತೇವೆ. ಚಿಂತಕ, ದಾರ್ಶನಿಕ ಓಶೋ ರಜನೀಶ್ ಹೇಳುವಂತೆ ಸಿಟ್ಟು ನಮ್ಮ ವೈರಿ. ವೈರಿಯೊಡನೆ ಯಾರಾದರೂ ಸ್ನೇಹದಿಂದ ಇರಲು ಸಾಧ್ಯವೇ? ಆದರೆ ಆ ಸಿಟ್ಟೆಂಬ ವೈರಿಯನ್ನು ನಾವು ನಮ್ಮ ಪ್ರಿಯ ಅತಿಥಿಯಂತೆ ನಮ್ಮೊಳಗೆ ಆಹ್ವಾನಿಸುತ್ತೇವೆ. ಕೊನೆಗೆ ಆ ಬೇಡದ ಅತಿಥಿಯಿಂದ ನಾವು ಇಲ್ಲದ ಪಾಡನ್ನು ಅನಿವಾರ್ಯವಾಗಿ ಅನುಭವಿಸುತ್ತೇವೆ. ಏಕೆಂದರೆ ನಮ್ಮ ವೈರಿ ಯಾವತ್ತೂ ನಮ್ಮ ಹಿತವನ್ನು ಬಯಸುವುದಿಲ್ಲ. ಆತನಿಂದ ನಮಗೆ ಒಳ್ಳೆಯದಾಗುವುದು ಸಾಧ್ಯವೇ ಇಲ್ಲ. ಆತನನ್ನು ನಾವು ಅತಿಥಿಯಂತೆ ಬರಮಾಡಿಕೊಂಡರೂ ಆತನ ಸ್ವಭಾವ ಮತ್ತು ಉದ್ದೇಶವೇ ನಮ್ಮನ್ನು ನಾಶ ಮಾಡುವುದಾಗಿದೆ. ಹಾಗಿರುವಾಗ ನಾವು ಅತಿ ಮುಖ್ಯವಾಗಿ ಮಾಡಬೇಕಾದದ್ದು ಏನು? ಆ ವೈರಿಯನ್ನು ನಮ್ಮ ಮನಸ್ಸಿನಿಂದ ಒದ್ದೋಡಿಸುವುದು. ಆದುದರಿಂದ ಸಿಟ್ವೆಂಬ ವೈರಿಯನ್ನು ನಾವು ಆಹ್ವಾನಿಸಲೇಬಾರದು. ನಮ್ಮ ಮನಸ್ಸಿನ ಮೂಲ ಸ್ವಭಾವವಾಗಿರುವ ಶಾಂತಿ ಮತ್ತು ಪ್ರಫುಲ್ಲತೆಯನ್ನು ನಾವು ಹೊರಗಿನಿಂದ ಪಡೆಯಲು ಬರುವುದಿಲ್ಲ. ಏಕೆಂದರೆ ಅದು ನಮಗೆ ಅತಿಥಿ ಅಲ್ಲ! ಮನೆಯ ಒಳಗಿನ ಸದಸ್ಯರನ್ನು ಅತಿಥಿಗಳಾಗಿ ಕಾಣಲು ಉಂಟೆ? ಹಾಗೆಯೇ ನಮ್ಮ ಮನಸ್ಸಿನ ಮೂಲ ಸ್ವಭಾವವಾದ ಶಾಂತತೆ ಮತ್ತು ಪ್ರಫುಲ್ಲತೆಯನ್ನು ನಾವು ನಮ್ಮೊಳಗೇ ಕಾಣಬೇಕು. ಆಗಲೇ ಬದುಕಿನಲ್ಲಿ ಶಾಂತಿ, ನೆಮ್ಮದಿ ಪ್ರಾಪ್ತವಾಗುವುದು. ಮನಸ್ಸಿನ ಈ ಮೂಲ ಸ್ವಭಾವವನ್ನು ಅರಿಯಲು ಸಾಧ್ಯವಾದರೆ ನಮ್ಮೊಳಗೆ ನೆಲೆಸಿರುವ ದೇವರನ್ನು ಕಾಣಲು ನಮಗೆ ಕಷ್ಟವಾಗದು !