Home » ದೇವರಲ್ಲಿ ಪ್ರೀತಿ
 

ದೇವರಲ್ಲಿ ಪ್ರೀತಿ

by Kundapur Xpress
Spread the love

ಮನಸ್ಸಿನ ನಿಜವಾದ ಆನಂದಕ್ಕೆ ನಾವು ಸತ್ಕರ್ಮಗಳಲ್ಲಿ ನಿರತರಾಗಬೇಕು ಎಂದು ಜ್ಞಾನಿಗಳು ಹೇಳುತ್ತಾರೆ. ಸತ್ಕರ್ಮಗಳಲ್ಲಿ ನಿರತರಾಗಲು ಎಲ್ಲರೂ ಬಯಸುತ್ತಾರೆ. ಆದರೆ ಅದರ ಹಿಂದಿನ ಉದ್ದೇಶ ಮಾತ್ರ ನಿರ್ಮಲವಾಗಿರುವುದಿಲ್ಲ. ಅಂದರೆ ನಾವು ಕೈಗೊಳ್ಳುವ ಸತ್ಕರ್ಮಗಳು ಎಲ್ಲರ ಗಮನಕ್ಕೂ ಬಂದು ಎಲ್ಲರೂ ನಮ್ಮನ್ನು ಹಾಡಿ ಹೊಗಳಬೇಕೆಂದು ನಾವು ಹಂಬಲಿಸುತ್ತೇವೆ. ಪ್ರಚಾರ ಮತ್ತು ಹೊಗಳಿಕೆಯನ್ನು ಅಪೇಕ್ಷಿಸುವವರೇ ಅಧಿಕ. ಇದು ನಮ್ಮ ಬಲುದೊಡ್ಡ ದೌರ್ಬಲ್ಯ. ಅದಕ್ಕೆ ಮುಖ್ಯ ಕಾರಣ ಐಹಿಕ ಪ್ರಪಂಚಕ್ಕೆ ನಾವು ಬಿಗಿಯಾಗಿ ಅಂಟಿ ಕೊಂಡಿರುವುದೇ ಆಗಿದೆ. ಹಾಗಾಗಿ ನಾವು ಯಾವ ಕಾರ್ಯ ಕೈಗೊಂಡರೂ ಅದರ ಫಲವನ್ನು ಅಪೇಕ್ಷಿಸುತ್ತೇವೆ. ಫಲ ದೊರೆತರೆ ಮಾತ್ರ ಅದರಿಂದ ಮುಂದೆ  ಕೈಗೊಳ್ಳಬಹುದಾದ ಸತ್ಕಾರ್ಯಗಳಿಗೆ ಪ್ರೇರಣೆ, ಪ್ರೋತ್ಸಾಹ ಸಿಗುತ್ತದೆ ಎಂಬ ಭಾವನೆಯನ್ನು ಬೆಳೆಸಿಕೊಂಡಿರುತ್ತೇವೆ. ನಾವು ಕೈಗೊಂಡ ಸತ್ಕಾರ್ಯಗಳಿಂದ ಪ್ರಯೋಜನ ಪಡೆಯುವ ಜನ-ಜಗತ್ತು ನಮಗೆ ಕೃತಜ್ಞರಾಗಿರಬೇಕೆಂದು ಹಂಬಲಿಸುತ್ತೇವೆ. ಅಂತಹ ಕೃತಜ್ಞತೆ ಪ್ರಕಟಗೊಳ್ಳದೇ ಹೋದಾಗ ನಾವು ಕುದ್ಧರಾಗುತ್ತೇವೆ. ‘ಈ ಜಗತ್ತಿಗೆ ಇನ್ನು ಯಾವ ಉಪಕಾರವನ್ನೂ ಮಾಡಬಾರದು  ಜನರು ಕೇವಲ ಸ್ವಾರ್ಥಿಗಳು, ಕೃತಜ್ಞತೆ ಇಲ್ಲದವರು’ ಎಂದು ಮನಸ್ಸಿನೊಳಗೆ ಹೀಗಳೆಯುತ್ತೇವೆ. ಆ ಸಂಕಟವನ್ನು ತಾಳಲಾರದೆ ಎಲ್ಲರಲ್ಲೂ ಅದನ್ನು ಹೇಳಿಕೊಂಡು ಜನರನ್ನು, ಜಗತ್ತನ್ನು ನಿಂದಿಸಿ ತೃಪ್ತಿಪಟ್ಟುಕೊಳ್ಳುತ್ತೇವೆ. ಈ ಬಗೆಯ ಮನೋಭಾವವನ್ನು ನಾವು ಹೊಂದಿರುವುದೇ ಆದಲ್ಲಿ ನಾವು ಕೈಗೊಳ್ಳುವ ಯಾವುದೇ ಕಾರ್ಯಗಳನ್ನು ಸತ್ಕಾರ್ಯಗಳೆಂದು ತಿಳಿಯಲಾಗದು. ಸ್ವಾಮಿ ವಿವೇಕಾನಂದರು ಹೇಳುವಂತೆ ನಾವು ದೇವರನ್ನು ಪ್ರೀತಿಸಬೇಕು ಏಕೆಂದರೆ ದೇವರನ್ನು ಪ್ರೀತಿಸುವಲ್ಲಿ ನಾವು ದೇವರನ್ನು ಅಲ್ಲದೆ ಬೇರೆ ಏನನ್ನೂ ಬಯಸೆವು. ಹಾಗಾಗಿ ನಮ್ಮ ಸತ್ಕಾರ್ಯಗಳಿಗೆ ಜನರಾಗಲೀ ಜಗತ್ತಾಗಲೀ ಕೃತಜ್ಞರಾಗಿರಬೇಕೆಂಬ ಅಪೇಕ್ಷೆಯೂ ಉದ್ಭವವಾಗದು.

   

Related Articles

error: Content is protected !!