Home » ಬಂಧ ಮುಕ್ತಿ
 

ಬಂಧ ಮುಕ್ತಿ

by Kundapur Xpress
Spread the love

ಸತ್ತ ಬಳಿಕ ಸ್ವರ್ಗವನ್ನು ಪಡೆಯಲು ಪುಣ್ಯವನ್ನು ಸಂಪಾದಿಸಬೇಕು ಎಂಬ ಉದ್ದೇಶವನ್ನು ನಾವು ಬಾಳಿನಲ್ಲಿ ಇಟ್ಟುಕೊಳ್ಳುತ್ತೇವೆ. ಸ್ವರ್ಗದ ಕುರಿತಾದ ನಮ್ಮ ಪರಿಕಲ್ಪನೆ ಏನು ಎಂಬ ಪ್ರಶ್ನೆಗೆ ನಮ್ಮಲ್ಲಿ ಸರಿಯಾದ ಉತ್ತರವಿಲ್ಲ. ಒಟ್ಟಾರೆಯಾಗಿ ಅದು ಅತ್ಯಂತ ವೈಭವೋಪೇತವಾದದ್ದು; ಸುಖಭೋಗಗಳಿಂದ ಕೂಡಿದ್ದು; ಜರಾ ಮರಣರಹಿತವಾದ್ದು ಎಂಬುದಾಗಿ ತೆರೆದುಕೊಳ್ಳುವ ನಮ್ಮದೇ ಕಲ್ಪನೆಯ ಸ್ವರ್ಗ ಪ್ರಾಯಶಃ ಪುರಾಣದಲ್ಲಿ ಬರುವ ಸ್ವರ್ಗಕ್ಕಿಂತಲೂ ಸಾವಿರಪಟ್ಟು ಉತ್ತಮವಾಗಿದೆ! ಸೂಕ್ಷ್ಮವಾಗಿ ಹೇಳಬೇಕೆಂದರೆ ಸುಖ ಲೋಲುಪತೆಯೇ ಬದುಕಿನ ಉದ್ದೇಶವೆಂಬುದು ನಮ್ಮ ಸಿದ್ಧಾಂತವಾಗಿದೆ. ಅದಕ್ಕಾಗಿ ಸತ್ತ ಬಳಿಕವೂ ಅದು ‘ಸ್ವರ್ಗ’ದಲ್ಲಿ ದೊರಕಬೇಕೆಂಬ ಆಸೆ ನಮ್ಮದು. ಆದರೆ ‘ಸ್ವರ್ಗವೆಂಬುದು ನಮ್ಮ ಕಾಮನೆಗಳಿಂದ ಉದಿಸಿದ ಒಂದು ಮೂಢನಂಬಿಕೆ’ ಎಂಬ ಎಚ್ಚರವನ್ನು ವಿವೇಕವಾಣಿ ನೀಡುತ್ತದೆ. ನಮ್ಮಲ್ಲಿರುವ ಆಸೆಗಳು ಅಗಣಿತ. ನಮ್ಮ ಎಲ್ಲ ಆಸೆಗಳನ್ನು ಈಡೇರಿಸಲೇಬೇಕೆಂಬ ಸಂಕಲ್ಪದಲ್ಲಿ ನಾವು ಬದುಕುತ್ತಿದ್ದೇವೆ. ಆದರೆ ಒಂದು ಆಸೆ ಈಡೇರಿದೊಡನೆಯೇ ಆದರ ಸ್ಥಾನವನ್ನು ತುಂಬಲು ಸಾವಿರ ಆಸೆಗಳು ಜನುಮಿಸಿರುತ್ತವೆ ಎಂಬುದು ಅನುಭವಕ್ಕೆ ಬಂದರೂ ಅದನ್ನು ಅಲಕ್ಷಿಸುವಷ್ಟು ಮೂಢರು ನಾವು! ಸ್ವಾಮಿ ವಿವೇಕಾನಂದರು ಹೇಳುವಂತೆ ‘ಬಯಕೆಯೇ ಬಂಧನ. ಅದು ಅವನತಿಗೆ ಮೂಲ, ಬಯಕೆ ಎಂಬ ಬಂಧನದಿAದ ಪಾರಾಗುವುದೇ ಮುಕ್ತಿ’ ನಾವು ನೋಡುವ, ತಿಳಿಯುವ, ಪಡೆಯಲು ಬಯಸುವ ಎಲ್ಲದರಲ್ಲೂ ದೇವರನ್ನಲ್ಲದೆ ಬೇರೆ ಏನನ್ನೂ ಕಾಣಬಾರದು. ಏಕೆಂದರೆ ದೇವರನ್ನು ಮರೆತರೆ ನಾವು ಪಾಪವನ್ನಲ್ಲದೆ ಮತ್ತೇನನ್ನೂ ಕಾಣಲಾರೆವು. ನಾವು ನೋಡುವ ವಸ್ತುವಿನ ಮೇಲೆ ಭ್ರಮೆಯ ಮುಸುಕು ಆವರಿಸಿದಾಗ ನಮಗಲ್ಲಿ ಪಾಪವೇ ಕಾಣುವುದು. ಆದುದರಿಂದ ಭ್ರಮೆಗಳನ್ನು ಕಳೆದುಕೊಳ್ಳುವುದೇ ಮುಕ್ತಿ ದೇವರನ್ನು ಕಾಣಲು ಪ್ರಯತ್ನಿಸುವುದೇ ಅದಕ್ಕಿರುವ ಮಾರ್ಗ.

   

Related Articles

error: Content is protected !!