ಬದುಕಿನ ಭ್ರಮೆಗಳನ್ನು ಕಳಚಿಕೊಳ್ಳಲು ಅತಿ ಮುಖ್ಯವಾಗಿ ಬೇಕಾಗಿರುವುದು ವಾಸ್ತವ ಪ್ರಜ್ಞೆ ಬದುಕಿನ ಸಮಸ್ತ ವಿದ್ಯಮಾನಗಳನ್ನು, ಏರಿಳಿತಗಳನ್ನು ಸಾಕ್ಷೀ ಭಾವದಿಂದ ನೋಡಲು ಸಾಧ್ಯವಾಗುವುದರಲ್ಲೇ ವಾಸ್ತವ ಪ್ರಜ್ಞೆ ಕೆಲಸಮಾಡುತ್ತದೆ. ಸುಖ, ದುಃಖ, ಸಿಟ್ಟು, ಕೋಪ, ತಾಪ, ಅಸಹನೆ ಎಲ್ಲವೂ ನಮ್ಮಲ್ಲಿನ ಮೂಲ ಶಾಂತ ಸ್ವಭಾವಕ್ಕೆ ವಿರುದ್ಧವಾದವುಗಳು. ಅತಿಯಾದ ಸಂತೋಷ, ಅತಿಯಾದ ದುಃಖ, ಅತಿಯಾದ ಕ್ರೋಧವನ್ನು ತಳೆದಾಗ ನಾವು ನಿಜಕ್ಕೂ ನಾವಾಗಿರುವುದಿಲ್ಲ. ಅಂತಹ ಸಂದರ್ಭಗಳಲ್ಲಿ ಸಮತ್ವದ ಮೂಲ ಸ್ವಭಾವದಿಂದ ನಾವು ಎಷ್ಟೋ ದೂರ ಸಾಗಿರುತ್ತೇವೆ. ಆದುದರಿಂದಲೇ ಆ ಸನ್ನಿವೇಶ, ವಿದ್ಯಮಾನಗಳು ಹಾಗೂ ಅದರಲ್ಲಿ ಒಳಗೊಂಡ ಇತರ ವ್ಯಕ್ತಿಗಳಿಂದಾಗಿ ನಮ್ಮ ಒಟ್ಟು ಸ್ವಭಾವ, ವರ್ತನೆ ಪ್ರಭಾವಿತವಾಗಿ ನಮ್ಮ ಮೂಲ ಗುಣ-ಸ್ವಭಾವಕ್ಕೆ ವ್ಯತಿರಿಕ್ತವಾಗಿ ನಾವು ನಡೆದುಕೊಳ್ಳುತ್ತೇವೆ. ನಮ್ಮಲ್ಲಿ ಆಗೀಗ ಭುಗಿಲೇಳುವ ಅತಿರೇಕದ ಭಾವಗಳನ್ನು ನಾವು ನಿಯಂತ್ರಿಸುವುದಕ್ಕಿಂತಲೂ ಮಿಗಿಲಾಗಿ ಅವುಗಳನ್ನು ಸೂಕ್ಷ್ಮವಾಗಿ ಸಾಕ್ಷೀಭಾವದಿಂದ ತಿಳಿದುಕೊಳ್ಳುವುದರಲ್ಲೇ ನಮ್ಮ ವಿಜಯವಿದೆ. ಆ ವಿಜಯ ದೈಹಿಕವೂ, ಮಾನಸಿಕವೂ, ಬೌದ್ಧಿಕವೂ ಆಗಿರುವುದಲ್ಲದೆ ಆತ್ಮೋನ್ನತಿಯ ವಿಜಯವೂ ಆಗಿರುತ್ತದೆ. ಸಮತ್ವ ಹಾಗೂ ಶಾಂತತೆಯ ನಮ್ಮ ಮೂಲ ಸ್ವಭಾವಕ್ಕೆ ವ್ಯತಿರಿಕ್ತವಾಗಿ ಬದುಕಿನಲ್ಲಿ ನಾವು ನಡೆದುಕೊಳ್ಳುವುದರಿಂದ ಅನೇಕ ಬಗೆಯ ಕಾಯಿಲೆಗಳಿಗೆ ನಾವು ಗುರಿಯಾಗುವುದು ಸಹಜವೇ ಆಗಿದೆ. ಈಗ ಪಾಶ್ಚಾತ್ಯ ವೈದ್ಯಕೀಯ ವಿಜ್ಞಾನ ಅದನ್ನೇ ಪದೇ ಪದೇ ಹೇಳುತ್ತಿದೆ. ನಿಮ್ಮ ಸಿಟ್ಟು, ಕೋಪ, ತಾಪ, ಉದ್ವೇಗಗಳು ನಿಮಗೆ ರಕ್ತದೊತ್ತಡ, ಮಧುಮೇಹ, ಹೃದ್ರೋಗ, ನರದೌರ್ಬಲ್ಯ ಇತ್ಯಾದಿ ಕಾಯಿಲೆಗಳನ್ನು ತರಬಲ್ಲುವು ಎಂದು ವೈದ್ಯರು ಹೇಳುತ್ತಿರುತ್ತಾರೆ. ಒಂದು ಅತಿಯಿಂದ ಇನ್ನೊಂದು ಅತಿಗೆ ಜಿಗಿಯುವ, ನಮ್ಮದಲ್ಲದ ‘ಸ್ವಭಾವ‘ವನ್ನು ನಾವು ಬಿಟ್ಟುಬಿಡುವುದೇ ಲೇಸು. ಏಕೆಂದರೆ ಅತಿರೇಕದ ಭಾವದಲ್ಲಿ ಮನಸ್ಸಿನ ಸಿಮಿತ ನಷ್ಟವಾಗುವಾಗ ದೇವರ ಸ್ಮರಣೆಯಿಂದ ಸಾವಿರ ಯೋಜನಗಳಷ್ಟು ದೂರಕ್ಕೆ ನಾವು ಎಸೆಯಲ್ಪಟ್ಟಿರುತ್ತೇವೆ