ನಮ್ಮೊಳಗೆ ಸದಾ ಹೆಡೆ ಎತ್ತುವ ಸ್ವಾರ್ಥವನ್ನು ನಾವು ಅಷ್ಟು ಸುಲಭದಲ್ಲಿ ನಿಯಂತ್ರಿಸಲು ಸಾಧ್ಯವೇ? ಎಷ್ಟೋ ವೇಳೆ ನಾವು ಸ್ವಾರ್ಥಪರರಾಗಿದ್ದೇವೆ ಎಂಬ ಬಗ್ಗೆ ನಮಗೆ ಅನುಮಾನವೇ ಉಂಟಾಗುವುದಿಲ್ಲ. ಹಾಗಿರುವಾಗ ಸ್ವಾರ್ಥವನ್ನು ಗೆಲ್ಲುವುದಾದರೂ ಹೇಗೆ? ಅದಕ್ಕೆ ಜ್ಞಾನಿಗಳು ಹೇಳುವ ಉಪಾಯ ಹೀಗಿದೆ: ಪರಮಾತ್ಮನ ಅಂಶವಾಗಿ ನಮ್ಮಲ್ಲಿ ನೆಲೆಸಿರುವ ಜೀವಾತ್ಮನನ್ನು ಕಾಣಲು ಪ್ರಯತ್ನಿಸುವ ಮೂಲಕವೇ ನಮ್ಮೊಳಗಿನ ಸಿಟ್ಟು, ಅಸಹನೆ, ಸುರಹಂಕಾರ, ದುರಭಿಮಾನ, ಆಸೆ ಬುರುಕತನವನ್ನು ಗೆಲ್ಲಲು ಸಾಧ್ಯವಾಗುವುದು. ಆತ್ಮಪ್ರಜ್ಞೆ ಜಾಗೃತವಾಗಿರುವಲ್ಲಿ ದೇಹವು ಮನಸ್ಸಿನಿಂದ, ಮನಸ್ಸು ಬುದ್ಧಿಯಿಂದ ನಿಯಂತ್ರಿಸಲ್ಪಡುತ್ತದೆ. ದೇವರನ್ನು ಭಜಿಸುವುದೆಂದರೆ ದೇವರೊಡನೆ ಒಂದಾಗಲು ಪ್ರಯತ್ನಿಸುವುದೇ ಆಗಿದೆ. ಆ ಪ್ರಯತ್ನದಲ್ಲಿ ಇತರೆಲ್ಲ ಕಾಮನೆಗಳು ಗೌಣವಾಗುವುದಲ್ಲದೆ ಅವು ಮನಸ್ಸಿನಿಂದ ಸಂಪೂರ್ಣವಾಗಿ ಹೊರಹೋಗುತ್ತವೆ. ದೇವರ ಸ್ಮರಣೆಯಿಂದ ಮನದೊಳಗೆ ಪ್ರಜ್ವಲಿಸುವ ದಿವ್ಯ ಜ್ಯೋತಿಯು ಕಾಮನೆಗಳೆಂಬ ಅಜ್ಞಾನವನ್ನು ಹೊಡೆದೋಡಿಸುತ್ತದೆ. ಹಾಗಾಗಿ ಪಂಚೇಂದ್ರಿಯಗಳು ಅಂತರ್ಮುಖಿಗಳಾಗಿ ಆತ್ಮನೊಂದಿಗೆ ಸಹಕರಿಸುತ್ತವೆ. ದೇಹವೆಂಬ ಮನೆಯೊಳಗೆ ನೆಲೆಸಿರುವ ಆತ್ಮನೆಂಬ ಯಜಮಾನನ ಉಪಸ್ಥಿತಿಯನ್ನು ನಾವು ಗಮನಿಸದಿದ್ದರೆ ನಮ್ಮ ದೇಹ ಮತ್ತು ಮನಸ್ಸು ತಾವೇ ಈ ಮನೆಯ ಯಜಮಾನರೆಂದು ಭ್ರಮಿಸುತ್ತಾ ತಮಗೆ ಇಷ್ಟಬಂದAತೆ ಸುಖಲೋಲುಪತೆಯಲ್ಲಿ ಮುಳುಗುತ್ತವೆ. ಪರಿಣಾಮವಾಗಿ ಅಜ್ಞಾನದ ಅಂಧಕಾರವು ನಮ್ಮೊಳಗೆ ಮುಸುಕಿ ನಿರಂತರವಾಗಿ ಜನನ-ಮರಣಗಳ ಚಕ್ರಕ್ಕೆ ಸಿಲುಕಿಕೊಳ್ಳುತ್ತೇವೆ. ಈ ದುರಂತದಿಂದ ನಮ್ಮನ್ನು ಪರಮಾತ್ಮನೇ ಪಾರುಗೊಳಿಸಬೇಕು. ಆದುದರಿಂದ ನಮ್ಮೊಳಗೆ ಜೀವಾತ್ಮನಾಗಿ ನೆಲೆಸಿರುವ ಪರಮಾತ್ಮನನ್ನು ಕಾಣುವ ನಿರಂತರ ಪ್ರಯತ್ನಕ್ಕೆ ನಾವು ತೊಡಗಬೇಕು. ದೇಹ ಮತ್ತು ಮನಸ್ಸನ್ನು ನಿಯಂತ್ರಿಸುವ ಆತ್ಮಶಕ್ತಿಯನ್ನು ನಮ್ಮಲ್ಲಿ ನಾವು ಕಂಡು ಕೊಂಡಾಗಲೇ ನಾವು ದೇವರಿಗೆ ಹತ್ತಿರವಾಗುವೆವು.