ಐಹಿಕ ಬದುಕಿನಲ್ಲಿ ನಾವು ಜೀವಿಸುವುದೇ ನಾಳೆಗಳಲ್ಲಿ ಎಂಬ ಮಾತಿದೆ. ನಾಳೆ ಎಂದರೆ ಭವಿಷ್ಯ. ಭವಿಷ್ಯದ ಬಗ್ಗೆ ನಾವು ತುಂಬ ಆಶಾವಾದಿಗಳು. ನಮಗೆ ಭೂತ ಮತ್ತು ವರ್ತಮಾನ ಕಾಲದ ಬಗ್ಗೆ ಕಾಳಜಿ ಇಲ್ಲದಿದ್ದರೂ ಭವಿಷ್ಯದ ಬಗ್ಗೆ ಮಾತ್ರ ತುಂಬ ಚಿಂತೆ ಇದೆ. ಆದುದರಿಂದಲೇ ನಾವು ಬದುಕಿನಲ್ಲಿ ಸದಾ ನಾಳೆಗಳತ ಮುಖ ಮಾಡಿಕೊಂಡಿರುತ್ತೇವೆ. ಆ ನಾಳೆಗಳೇ ಇಂದಾಗಿ ಬರುವಾಗ ಅದನ್ನು ಕೇವಲ ನಿಟ್ಟುಸಿರಿನಿಂದ ಕಳೆಯುತ್ತೇವೆ. ಹಾಗೆ ನಿಟ್ಟುಸಿರಿನಿಂದ ಕಳೆದ ಇಂದುಗಳು ಸದ್ದಿಲ್ಲದೆ ಭೂತಕಾಲಕ್ಕೆ ಸರಿಯುತ್ತವೆ. ಹಾಗಿದ್ದರೂ ನಾವು ನಾಳೆಗಳ ಬಗ್ಗೆ ಆಸೆಯನ್ನು ಇಟ್ಟು ಕೊಂಡಿರುತ್ತೇವೆ. ಈ ಆಸೆಗಳ ದೆಸೆಯಿಂದಾಗಿ ನಾವು ಐಹಿಕ ಜಗತ್ತಿನಲ್ಲಿ ಬದುಕುತ್ತೇವೆ. ನಮ್ಮ ಭವಿಷ್ಯ ಉಜ್ವಲವಾಗಿರಬೇಕೆಂದು ಬಯಸುವೆವಾದರೂ ವರ್ತಮಾನದ ಬಗ್ಗೆ ನಮಗೆ ಕಾಳಜಿ ಇರುವುದಿಲ್ಲ. ಇದೀಗ ಜಾರಿಹೋಗುತ್ತಿರುವ ಈ ಹೊತ್ತನ್ನು ಚೆನ್ನಾಗಿ, ಅರ್ಥಪೂರ್ಣವಾಗಿ ಕಳೆಯಬೇಕು ಎಂಬ ಬಗ್ಗೆ ಆಲೋಚಿಸದೆ ನಾಳೆಗಳ ಕನಸಿನಲ್ಲೇ ಕಾಲಹರಣ ಮಾಡುತ್ತೇವೆ. ಇದಕ್ಕೆ ಮುಖ್ಯ ಕಾರಣ ಆಸೆಗಳ ಹೊಂಗನಸನ್ನು ಹೊಸೆಯುವಷ್ಟು ಪ್ರಿಯವಾದುದು ನಮಗೆ ಬೇರೊಂದಿಲ್ಲ. ಆದರೆ ಆಸೆಗಳು ಈಡೇರದೆ ಹೋದಾಗ ಖಿನ್ನರಾಗುತ್ತೇವೆ. ವಿಧಿಯನ್ನು ದೂರುತ್ತೇವೆ. ‘ದೇವರು ನನ್ನ ಪಾಲಿಗೆ ನಿಷ್ಕರುಣಿ’ ಎಂದು ಟೀಕಿಸುತ್ತೇವೆ. ಮಹಾವೀರನ ಉಪದೇಶಾಮೃತ ಆಸೆಯೇ ದುಃಖಕ್ಕೆ ಮೂಲವೆಂದು ಗೌತಮ ಬುದ್ಧ ಹೇಳಿದರೆ, ‘ಮನಸ್ಸೆಂಬ ಸರಸ್ಸಿನಲ್ಲಿ ಆಸೆಗಳೆಂಬ ತರಂಗಗಳು ಏಳದಂತೆ ಮಾಡಲು ಮನಸ್ಸನ್ನು ಸ್ವಚ್ಚ, ಸ್ತಬ್ಧ ಹಾಗೂ ನಿಷ್ಕಲ್ಮಶವಾಗಿ ಇರಿಸಿಕೊಳ್ಳಲು ನಾವು ಪ್ರಯತ್ನಿಸಬೇಕು’ ಎಂಬುದೇ ಆಗಿದೆ. ಆಸೆಗಳನ್ನು ಹತ್ತಿಕ್ಕುವುದಕ್ಕಿಂತ ಅವುಗಳು ಮನದೊಳಗೆ ಜನಿಸದಂತೆ ಯತ್ನಿಸುವುದು ಹೆಚ್ಚು ಪರಿಣಾಮಕಾರಿ, ಅದಕ್ಕಾಗಿ ಏನು ಮಾಡಬೇಕು? ಮನಸ್ಸನ್ನು ನಿತ್ಯವೂ ಧ್ಯಾನದಲ್ಲಿ ತೊಡಗಿಸಬೇಕು. ದೇವರ ಸ್ಮರಣೆಯಲ್ಲಿ ನಿರತಗೊಳಿಸಬೇಕು. ಈ ಬದುಕು, ಪ್ರಪಂಚ ಎಲ್ಲವೂ ಕ್ಷಣಭಂಗುರವಾದುವುಗಳು ಎಂಬ ಅರಿವನ್ನು ಮೂಡಿಸಿಕೊಳ್ಳಬೇಕು.