ಕಠೋಪನಿಷತ್ತು ಹೇಳುತ್ತದೆ: ನಮ್ಮ ದೇಹವೆನ್ನುವುದು ಒಂದು ರಥ. ಪಂಚೇಂದ್ರಿಯಗಳು ಈ ರಥದ ಕುದುರೆಗಳು. ಆತ್ಮನೇ ಈ ರಥದಲ್ಲಿರುವ ರಥಿಕ. ಬುದ್ದಿ ಈ ರಥದ ಸಾರಥಿ, ಮನಸ್ಸೆಂಬದು ಆ ಸಾರಥಿಯ ಕೈಯಲ್ಲಿರುವ ಲಗಾಮು, ಮೋಕ್ಷ ಈ ರಥದ ಗುರಿ. ಇಷ್ಟನ್ನು ನಾವು ತಿಳಿದುಕೊಂಡರೆ ರಥಿಕರಾಗಿರುವ ನಮ್ಮಲ್ಲಿ ಇರಬೇಕಾದ ಎಚ್ಚರಗಳು ನಮಗೆ ಸ್ಪಷ್ಟವಾಗಿರಬೇಕು. ನಮ್ಮ ಪಂಚೇಂದ್ರಿಯಗಳೆಂಬ ಕುದುರೆಗಳು ಬಹಳ ಚಂಚಲ. ಕಾಮನೆಗಳಿಂದ ಬಹಳ ಬೇಗನೆ ಪ್ರಚೋದಿತವಾಗುವ ಆ ಕುದುರೆಗಳು ಅಡ್ಡಹಾದಿ ಹಿಡಿಯುವುದು ಕೂಡ ಅಷ್ಟೇ ಬೇಗ. ಆದುದರಿಂದ ಬುದ್ಧಿ ಎಂಬ ಸಾರಥಿಯ ಕೈಯಲ್ಲಿರುವ ಮನಸ್ಸೆಂಬ ಲಗಾಮು ನಮ್ಮ ಪಂಚೇಂದ್ರಿಯಗಳೆಂಬ ಕುದುರೆಗಳನ್ನು ಚೆನ್ನಾಗಿ ನಿಯಂತ್ರಿಸಬೇಕು. ಇಲ್ಲದಿದ್ದರೆ ರಥ ಮುಗ್ಗರಿಸುವುದು ನಿಶ್ಚಿತ. ಹಾದಿ ತಪ್ಪುವುದು ಖಚಿತ. ತತ್ಪರಿಣಾಮವಾಗಿ ಮೋಕ್ಷದ ಗುರಿಯನ್ನು ತಲುಪುವುದು ಅಸಂಭವ. ಹಾಗಿರುವಾಗ ಆತ್ಮನೆಂಬ ರಥಿಕನು ಸದಾ ಜಾಗೃತ ಸ್ಥಿತಿಯಲ್ಲಿರುವುದು ಅಗತ್ಯ. ಆತ ಸುಷುಪ್ತಿಗೆ ತಲುಪಿದರೆ ನಮ್ಮ ಪ್ರಯಾಣ ಸಂಪೂರ್ಣ ಎಡವಟ್ಟಾಗುತ್ತದೆ. ಬಾಹ್ಯ ಪ್ರಪಂಚಕ್ಕೆ ನಾವು ಬಿಗಿಯಾಗಿ ಅಂಟಿಕೊಂಡಷ್ಟೂ ನಮ್ಮ ದೇಹವೆಂಬ ರಥದೊಳಗಿನ ರಥಿಕ (ಆತ್ಮ) ನಿದ್ರಾಸ್ಥಿತಿಗೆ ತಲುಪುತ್ತಾನೆ. ಆಗ ರಥವು ಯಜಮಾನನಿದ್ದೂ ಇಲ್ಲದಂತಾಗುತ್ತದೆ. ಪರಿಣಾಮವಾಗಿ ಸಾರಥಿ (ಬುದ್ಧಿ) ರಥವನ್ನು ಸರಿಯಾಗಿ ನಡೆಸುವ ತನ್ನ ಕರ್ತವ್ಯವನ್ನು ಅಲಕ್ಷಿಸುವುದರಿಂದ ಆತನ ಕೈಯಲ್ಲಿರುವ ಲಗಾಮು (ಮನಸ್ಸು) ಅನಿಯಂತ್ರಿತವಾಗುತ್ತದೆ. ಆಗ ನಿಯಂತ್ರಣ ತಪ್ಪಿದ ಕುದುರೆಗಳು (ಪಂಚೇಂದ್ರಿಯಗಳು) ರಥ (ದೇಹ)ವನ್ನು ಎಲ್ಲೆಲ್ಲಿಗೋ ಕೊಂಡೊಯ್ಯುತ್ತವೆ. ರಥ ಮುಗ್ಗರಿಸಿ ಬೀಳುತ್ತದೆ. ಗುರಿಯನ್ನು (ಮೋಕ್ಷ) ತಲುಪುವುದು ಅಸಾಧ್ಯವಾಗುತ್ತದೆ. ಬದುಕಿನ ದೊಡ್ಡ ದುರಂತವೇನು ಎಂದು ಒಮ್ಮೆ ಜ್ಞಾನಿಗಳೋರ್ವರನ್ನು ಪ್ರಶ್ನಿಸಲಾಯಿತು. ಅದಕ್ಕೆ ಅವರು ಬದುಕಿನಲ್ಲಿ ಗುರಿಯನ್ನು ತಲುಪಲು ವಿಫಲರಾಗುವುದು ದುರಂತವಲ್ಲ; ಆದರೆ ಗುರಿಯೇ ಇಲ್ಲದಿರುವುದು ಬದುಕಿನ ನಿಜವಾದ ದುರಂತ ಎಂದು ಉತ್ತರಿಸಿದರು! ಐಹಿಕ ಬದುಕಿಗೇನೋ ನಾವು ದೊಡ್ಡ ದೊಡ್ಡ ಗುರಿಗಳನ್ನೇ ಹಾಕಿಕೊಳ್ಳುತ್ತೇವೆ. ಆದರೆ ಆತ್ರೋನ್ನತಿಗಾಗಿ ಮಾತ್ರ ನಾವು ಯಾವ ಗುರಿಯನ್ನೂ ಹಾಕಿಕೊಳ್ಳುವುದಿಲ್ಲ. ನಮ್ಮ ಬದುಕಿನ ದುರಂತವೇ ಅದು. ಹಾಗಾಗಿ ಶಾಂತಿ ನಮಗೆ ದುರ್ಲಭ.